ಹಾಸನ: ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಸೋಮವಾರ (ಡಿ.4) ನಡೆದಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳಕ್ಕೆ ಬ್ರೇಕ್ ಹಾಕಲು ನವೆಂಬರ್ 24ರಿಂದ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಂದು ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಹಿಡಿದು, ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದೆ.
ಇನ್ನು ಒಬ್ಬಂಟಿಯಾದ ಅರ್ಜುನ ಒಂಟಿಸಲಗದ ಜತೆ ಕಾಳಗಕ್ಕಿಳಿದ್ದಾನೆ. ಈ ಎರಡೂ ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ. ಇವರೆಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತರು ಅರ್ಜುನನ ಮೇಲಿನಿಂದ ಇಳಿದು ಓಡಿದ್ದಾರೆ. ಬಳಿಕ ಅರ್ಜುನನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮಾವುತ ವಿನೋದ್ ಕಂಗಾಲಾಗಿ ಗೋಳಾಡಿದ್ದಾರೆ. ಸಾವಿನ ಆಘಾತದಿಂದ ಮಾವುತ ವಿನೋದ್ ಕಾಡಿನಲ್ಲೇ ಅಸ್ವಸ್ಥರಾಗಿದ್ದು, ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಚಿಕಿತ್ಸೆಗಾಘಿ ಆಸ್ಪತ್ರೆಗೆ ರವಾನಿಸಲಾಯಿತು.
ಅರ್ಜುನನ ಮೃತದೇಹವನ್ನು ತಬ್ಬಿಕೊಂಡು ಅಳುತ್ತಿರುವ ಮಾವುತರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನಂತೆ ಜತೆಗಿದ್ದ ಅರ್ಜುನನ್ನು ಕಳೆದುಕೊಂಡ ಮಾವುತರು ಕಣ್ಣೀರು ಹಾಕುತ್ತಿದ್ದು, ಮಾವುತರ ಗೋಳಾಟ ಕಂಡು ಸ್ಥಳದಲ್ಲಿದ್ದವರು ನೀರವ ಮೌನಕ್ಕೆ ಜಾರಿದರು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾರ್ಯದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ದಸರಾ ಆನೆ ಅರ್ಜುನನ ಸಾವಿನ ಬಗ್ಗೆ ಡಿಎಫ್‌ಪೊ ಮೋಹನ್ ಕುಮಾರ್ ಮಾಹಿತಿ ನೀಡಿದ್ದು, ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಸಳೂರು ವಲಯದಲ್ಲಿ ನಡೆಯುತ್ತಿತ್ತು. ನಡುತೋಪಿನಲ್ಲಿ ಬೆಳಗ್ಗೆಯಿಂದಲೇ ಕಾಡಾನೆಗಳನ್ನು ಗುರುತಿಸಿ ಅದನ್ನು ನಿಗಾವಹಿಸಲಾಗುತ್ತಿತ್ತು. ಕಾಡಾನೆಗಳು ಇರುವ ಸ್ಥಳಕ್ಕೆ ಹೋದಾಗ 12 ಆನೆಗಳು ಇದ್ದವು. ಗುಂಪನ್ನು ಗಂಡಾನೆಯೊಂದು ಲೀಡ್ ಮಾಡುತ್ತಿತ್ತು.
ನಮ್ಮ ಸಾಕಾನೆಗಳು ಹೋದಾಗ ಚಾರ್ಜ್ ಮಾಡೋದಕ್ಕೆ ಬಂತು. ಡಾಕ್ಟರ್ ಗಂಡಾನೆ ಮತ್ತಿನಲ್ಲಿರುವುದನ್ನು ಗಮನಿಸಿದ್ದಾರೆ. ನಮ್ಮ ಅರ್ಜುನ ಆನೆ ಅದರ ಜತೆ ಕಾದಾಟಕ್ಕಿಳಿದಿದೆ. ಉಳಿದ ಆನೆಗಳೆಲ್ಲ ವಾಪಸ್ ಆದವು. ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿತು. ದಾಳಿ ಮಾಡಿದ ಕೂಡಲೇ ನಮ್ಮ ಸಿಬ್ಬಂದಿ ಸಾಕಾನೆಗಳು ವಾಪಸ್ ಬಂದವು. ಅರ್ಜುನನ ಮೇಲಿದ್ದ ಡಾಕ್ಟರ್ ಹಾಗೂ ಮಾವುತ ಕೂಡಾ ಇಳಿದು ಬಂದರು. ಕಾಡಾನೆ ಸ್ವಲ್ಪ ಬಲಿಷ್ಟವಾಗಿತ್ತು, ಅಲ್ಲದೇ ಕೋರೆಗಳು ಚೂಪಾಗಿದ್ದವು. ಕಾದಾಟದಲ್ಲಿ ಅರ್ಜುನ ಅಸುನೀಗಿದ್ದಾನೆ ಎಂದು ತಿಳಿಸಿದರು.
ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮುಂದಿನ ಕ್ರಮದ ಬಗ್ಗೆ ಸೂಚನೆ ಬಂದ ತಕ್ಷಣ ನಿರ್ವಹಿಸುತ್ತೇವೆ. ಮೃತಪಟ್ಟ ಭಾಗದಲ್ಲಿ ಅರ್ಜುನನ ಬಳಿಗೆ ನಾವು ಹೋಗುವುದಕ್ಕೆ ಆಗುತ್ತಿಲ್ಲ. ಅದರ ಸುತ್ತಮುತ್ತಲಲ್ಲೇ ಕಾಡಾನೆಗಳ ಓಡಾಡುತ್ತಿದೆ ಎಂದು ಹೇಳಿದರು.