ಬೆಂಗಳೂರು: ಬಿಬಿಎಂಪಿಯ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಯ ಬಗ್ಗೆ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮ ಆಯೋಜನೆಯು ಉತ್ತಮ ಕಾರ್ಯವೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೊಲ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಎನ್.ಎಚ್.ಎಂ ಕರ್ನಾಟಕ ಹಾಗೂ Yosaid ಇನೊವೇಷನ್ ಫೌಂಡೇಶನ್ ರವರ ಸಹಯೋಗದೊಂದಿಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಯ ಬಗ್ಗೆ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮವನ್ನು ಪಾಲಿಕೆ ಕೆಂದ್ರ ಕಛೇರಿ ನೌಕಕರ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಬಿಬಿಎಂಪಿ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಕೇರ್ ಕಂಪ್ಯಾನಿಯನ್ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಗರ್ಭಿಣಿಯರಿಗೆ ಹಾಗೂ ಬಾಣಂತಿ ಮತ್ತು ಮಗುವಿನ ಆರೈಕೆಗೆ ಬೇಕಾಗುವ ಸಲಹೆಗಳನ್ನು ನೀಡಲು ಪಾಲಿಕೆ ಆಸ್ಪತ್ರೆಗಳು ಹಾಗೂ ಪಿಎಚ್.ಸಿಯ ವೈದ್ಯಾಧಿಕಾರಿಗಳು ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡುವ ಗರ್ಭಿಣಿಯರಿಗೆ ಗೊಂದಲ ಹಾಗೂ ಆತಂಕವಿದ್ದರೆ ಒಪಿಡಿಯಲ್ಲಿ ವೈದ್ಯಾದಿಕಾರಿಗಳು ಪರಿಹಾರ ನೀಡಲು ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕಳೆದ 5 ವರ್ಷದಿಂದ ಕೇರ್ ಕಂಪ್ಯಾನಿಯನ್ ಅನ್ನು ಪಾಲಿಕೆಯ ರೆಫೆರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದ್ದು, ಹಂತ-ಹಂತವಾಗಿ ಹೆರಿಗೆ ಆಸ್ಪತ್ರೆಗಳಲ್ಲಿ ವಿಸ್ತಿರಿಸಿಕೊಂಡು ಪ್ರಸ್ತುತ ಪಾಲಿಕೆಯ 31 ಹೆರಿಗೆ ಆಸ್ಪತ್ರೆಗಳಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಈ ಕಾರ್ಯಕ್ರಮವು ಹೆಚ್ಚು ಅನುಕೂಲಕರವಾಗಿದೆ ಎಂದು ತಿಳಿಸಿದರು.
ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ವಿತರಣೆ: ಪಾಲಿಕೆ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಕೇರ್ ಕಂಪ್ಯಾನಿಯನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿರುವ ಪಾಲಿಕೆಯ ಶ್ರೀರಾಮ್ ಪುರ ಹಾಗೂ ಬನಶಂಕರಿ ರೆಫರಲ್ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ Yosaid ಇನೊವೇಷನ್ ಫೌಂಡೇಶನ್ ನ ಅಸೋಸಿಯೇಟ್ ಡೈರೆಕ್ಟರ್ ಡಾ. ತನ್ಮಯ್ , ಸಾರ್ವಜನಿಕರ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸಯೈದ್ ಸಿರಾಜುದ್ದೀನ್ ಮದನಿ, ತಾಯಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ವೈದ್ಯಾಧಿಕಾರಿಯಾದ ಡಾ. ಶೋಭ ಸೇರಿದಂತೆ ಪಾಲಿಕೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.