ಮೈಸೂರು: ಕಾವೇರಿ ನೀರು ವಿವಾದದಲ್ಲಿ ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಮತ್ತು ವಕೀಲ ಎಫ್.ಎಸ್.ನಾರಿಮನ್ ಅವರು ಮಾಡಿದ ತಪ್ಪುಗಳಿಂದ ಕರ್ನಾಟಕದ ಜನ ಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಯಾವ್ಯಾವ ಕಾಲಘಟ್ಟದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ವಿವರಿಸಿದರಲ್ಲದೆ, ಕಾವೇರಿ ವಿವಾದ ಬಗೆಹರಿಸುವುದು ಅಷ್ಟು ಸುಲಭವಲ್ಲ. ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿದರೂ ಸಾಧ್ಯವಾಗುವುದಿಲ್ಲ. ಪಾರ್ಲಿಮೆಂಟ್ ಕೂಡ ಬದಲಾಯಿಸುವುದು ಕಷ್ಟ. ರಾಷ್ಟ್ರೀಯ ಜಲ ನೀತಿ ಇಲ್ಲದಿರುವ ಕಾರಣ ಸಮಸ್ಯೆ ಜೀವಂತವಾಗಿದೆ ಎಂದು ತಿಳಿಸಿದರು.
ಸಂವಿಧಾನದ 262ನೇ ಪರಿಚ್ಛೇದದ ಪ್ರಕಾರ ನ್ಯಾಯಾಲಯಕ್ಕೆ ನದಿಗಳ ವಿವಾದ ಇತ್ಯರ್ಥಪಡಿಸುವ ತೀರ್ಪು ಕೊಡುವ ಅಧಿಕಾರ ಇಲ್ಲ. ಇದರ ಪ್ರಕಾರ 1971ರಲ್ಲಿ ತಮಿಳುನಾಡಿನ ಕೃಷಿಕರು ಹಾಕಿದ ಅರ್ಜಿ, 1974ರಲ್ಲಿ ಕರ್ನಾಟಕ ಸರ್ಕಾರ ಕೃಷ್ಣ ನದಿ ವಿವಾದದಲ್ಲಿ ಅನ್ಯಾಯವಾಗಿದೆ ಎಂದು ಸಲ್ಲಿಸಿದ ಅರ್ಜಿ, 2004ರ ಮಧ್ಯಪ್ರದೇಶದ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.
ಆದರೆ 1980ರ ದಶಕದಲ್ಲಿ ತಮಿಳು ರೈತರ ಸಂಘ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿತು. ಅಲ್ಲದೇ 1990ರಲ್ಲಿ ಕಾವೇರಿ ನ್ಯಾಯಮಂಡಳಿ ಸ್ಥಾಪಿಸುವಂತೆ ಆದೇಶ ನೀಡಿದ್ದು ಸಂವಿಧಾನ ಬಾಹಿರ. ಇದನ್ನು ವಕೀಲರಾದ ಎಫ್.ಎಸ್.ನಾರಿಮನ್ ಯಾಕೆ ಪ್ರಶ್ನಿಸಲಿಲ್ಲ ಎಂದು ಹೇಳಿದರು.
1991ರಲ್ಲಿ ಜನ ಜಾನುವಾರು ಸಂಖ್ಯೆ ನೀಡಲಾಯಿತು. 2001ರಲ್ಲಿ ಕರ್ನಾಟಕ ಜನ ಜಾನುವಾರು ಸಂಖ್ಯೆ ನೀಡಲಿಲ್ಲ. ನ್ಯಾಯಾಧೀಶರು ಅಂದಾಜಿನ ಮೇಲೆ ಸಂಖ್ಯೆ ಬರೆದುಕೊಂಡರು. ಮಳೆ ಎಷ್ಟು ಬಂತು? ಎಷ್ಟು ನೀರಿದೆ? ಮಾಹಿತಿ ಇಲ್ಲ. ರಾಜಕಾರಣಿಗಳು, ಕಾನೂನು ಸಲಹೆಗಾರರ ಸ್ವಯಂಕೃತ ಅಪರಾಧದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದರು.
ಕಾವೇರಿ ವಿಚಾರದಲ್ಲಿ ನಾಡಿನ ಮೂರು ಪಕ್ಷಗಳು ಅಪರಾಧಿಗಳಾಗಿವೆ. ವಕೀಲರು ಏನು ವಾದ ಮಾಡುತ್ತಿದ್ದಾರೆ ಪರಿಶೀಲಿಸಲಿಲ್ಲ. ತಮಿಳುನಾಡಿನಲ್ಲಿ ಹುಟ್ಟಿದ ನಾರಿಮನ್ ಅವರನ್ನು ನಂಬಿದ ಕೇರಳ, ಕರ್ನಾಟಕ ರಾಜ್ಯಗಳು ಹಾಳಾದವು. ಎಲ್ಲರ ತಲೆ ಮೇಲೆ ಚಪ್ಪಡಿ ಎಳೆದರು ಎಂದು ಬೇಸರಿಸಿದರು.
ಈ ವರ್ಷ ಮುಂಗಾರು ವಿಫಲವಾಗುತ್ತದೆಂದು ಮಾಹಿತಿ ಸಿಕ್ಕ ತಕ್ಷಣ ಪ್ರಾಧಿಕಾರದ ಮುಂದೆ ಆದೇಶ ಕೊಡುವ ಮುಂಚೆ ವಾಸ್ತವಾಂಶ ಪರಿಶೀಲಿಸುವಂತೆ ಕೇಳಬೇಕಿತ್ತು. ಈ ಪ್ರಯತ್ನವನ್ನು ಸರ್ಕಾರ ಮಾಡಲಿಲ್ಲ. ಸಂಕಷ್ಟ ಸಮಯದಲ್ಲಿ ಸಂಗ್ರಹವಾಗಿರುವ ನೀರನ್ನು ಸಮಾನಾಂತರವಾಗಿ ಹಂಚಿಕೊಳ್ಳುವಂತೆ ನಿಯಮ ರೂಪಿಸಬೇಕಿತ್ತು. ಕರ್ನಾಟಕ ಸರ್ಕಾರ ಕುಡಿಯುವ ನೀರಿಗೆ ಮೀಸಲು ಕೊಡುವಂತೆ ಕೇಳಬೇಕಿತ್ತು. ಈವರೆಗೂ ಕೇಳಲಿಲ್ಲ. ಮನವಿ ಸಲ್ಲಿಸದಿದ್ದರೆ ಫಲ ಸಿಗುತ್ತದೆಯೇ ಎಂದು ಬೇಸರಿಸಿದರು.
ರಾಷ್ಟ್ರಪತಿಗೆ ಮನವಿ ಪರಿಹಾರ: ಅಂತರ ರಾಜ್ಯಗಳ ನದಿ ವಿವಾದವನ್ನು ಬಗೆಹರಿಸಲು ಮುಖ್ಯ ನ್ಯಾಯಾಧೀಶರು ನಿರಾಕರಿಸಿದರೆ, ಸಂವಿಧಾನದ 263ನೇ ಪರಿಚ್ಛೇದದ ಪ್ರಕಾರ ರಾಷ್ಟçಪತಿಗೆ ಮನವಿ ಸಲ್ಲಿಸಬಹುದು. ಅವರು ಯಾವುದೇ ಪ್ರದೇಶಕ್ಕೆ ಅನ್ಯಾಯವಾಗಿದ್ದರೆ ಸಮಿತಿ ನಿಯೋಜಿಸಿ ವರದಿ ತರಿಸಿಕೊಂಡು ಪರಿಹಾರ ನೀಡಬಹುದು. ಬೀದಿ ಹೋರಾಟ, ಗಲಾಟೆ, ಬಂದ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ನುಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಉಪಾಧ್ಯಕ್ಷ ಬಸವಣ್ಣ, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಇದ್ದರು.