ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ರಾಜ್ಯಕ್ಕೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದ್ದು, 15ದಿನಗಳ ಕಾಲ ಪ್ರತಿನಿತ್ಯ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶವನ್ನೇ ಎತ್ತಿ ಹಿಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನೇ ಗುರುವಾರ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಕರ್ನಾಟಕಕ್ಕೆ ಭಾರಿ ಶಾಕ್ ನೀಡಿದೆ. ಇದು ರಾಜ್ಯದ ಪಾಲಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ.
ಎಲ್ಲ ಹಂತಗಳಲ್ಲಿ ಹೊಡೆತ ಅನುಭವಿಸಿದ ರಾಜ್ಯ ಕಡೆಪಕ್ಷ ಸುಪ್ರೀಂಕೋರ್ಟ್ ಆದರೂ ರಾಜ್ಯದ ಪರ ನಿಲ್ಲಬಹುದು ಎಂಬ ಆಶಾವಾದದಿಂದ ಕಾಯುತ್ತಿತ್ತು. ಆದರೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಜಲ ತಜ್ಞರು, ನ್ಯಾಯ ತಜ್ಞರೇ ಇರುವ ಪ್ರಾಧಿಕಾರ ತೀರ್ಮಾನ ಸರಿಯಾಗಿಯೇ ಇರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಕರ್ನಾಟಕದ ಪಾಲಿಗೆ ನ್ಯಾಯದ ಬಾಗಿಲು ತೆರೆಯಲೇ ಇಲ್ಲ.
ನ್ಯಾಯಮೂರ್ತಿ ಗವಾಯಿ ಅವರ ನೇತೃತ್ವದ ಕಾವೇರಿ ಪೀಠದಲ್ಲಿ ನಡೆದ ವಿಚಾರಣೆಗೂ ಮುನ್ನ ರಾಜ್ಯ ಸರ್ಕಾರ ಬುಧವಾರವೇ ನೀರು ಬಿಡುಗಡೆ ಆದೇಶ ಪಾಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿವರಿಸಿ ಅಫಿಡವಿಟ್‌ನ್ನು ಸಲ್ಲಿಸಿತ್ತು.
ತಮಿಳುನಾಡಿನ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡಿಲ್ಲ : ಕೇಂದ್ರದ ಪರವಾಗಿ ವಾದ ಮಾಡಿದ ಮುಕುಲ್ ರೋಹಟ್ಗಿ ಅವರು, ಕರ್ನಾಟಕದವರು ಕರ್ನಾಟಕದ ಪರಿಸ್ಥಿತಿ ಆದ್ಯತೆಗೆ ತೆಗೆದುಕೊಂಡಿದ್ದಾರೆ. ಆದರೆ ತಮಿಳುನಾಡಿ ಪರಿಸ್ಥಿತಿಯನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಮಾನ್ಸೂನ್ ವಿಫಲವಾಗಿದೆ ಎಂದರೆ ತಮಿಳುನಾಡಿಗೆ ಮಳೆ ತರುವ ಈಶಾನ್ಯ ಮುಂಗಾರು ಕೂಡಾ ಕೊರತೆಯಾಗಲಿದೆ ಎಂದು ವಾದಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಎಲ್ಲ ರಾಜ್ಯಗಳ ತಜ್ಞರು ಇದ್ದಾರೆ. ಇದು ತಜ್ಞರು ಕೈಗೊಳ್ಳುವ ನಿರ್ಧಾರ. ಸುಮ್ಮನೆ ಅಂಕಿ ಅಂಶಗಳ ಲೆಕ್ಕದಲ್ಲಿ ಆದೇಶ ನೀಡುತ್ತಿಲ್ಲ ಎಂದು ವಕೀಲೆ ಐಶ್ವರ್ಯ ಭಾಟಿ ಕೂಡಾ ಹೇಳಿದರು.
ಅವರಿಗೆ ನೀರಾವರಿ ಚಿಂತೆ, ನಮಗೆ ಕುಡಿವ ನೀರಿನ ಚಿಂತೆ: ಈ ನಡುವೆ, ಕರ್ನಾಟಕದ ಪರ ವಾದ ಮಾಡಿದ ವಕೀಲ ಶ್ಯಾಂ ದಿವಾನ್, ತಮಿಳುನಾಡು ಸರ್ಕಾರ ನೀರಾವರಿಗೆ ಆದ್ಯತೆ ನೀಡುತ್ತಿದೆ. ಆದರೆ, ನಾವು ಕುಡಿಯುವ ನೀರಿನ ಬಗ್ಗೆ ಚಿಂತಿತರಾಗಿದ್ದೇವೆ. ನಮಗೆ ಬೆಳೆಬೆಳೆಯುವುದಕ್ಕೆ ಇರಲಿ ಕುಡಿಯುದಕ್ಕೇ ನೀರಿಲ್ಲ ಇನ್ನು ಎಲ್ಲಿಂದ ನೀರು ಬಿಡಬೇಕು ಎಂದು ವಾದಿಸಿದರು.
ʻʻನಮಗೆ ಈಶಾನ್ಯ ಮುಂಗಾರಿನ ಭಾಗ್ಯ ಇಲ್ಲ. ಆದರೆ ತಮಿಳುನಾಡಿಗೆ ಇನ್ನೂ ಈಶಾನ್ಯ ಮಳೆ ಬರುವುದು ಬಾಕಿ ಇದೆ. ನಮಗೆ ಕುಡಿಯೋ ನೀರಿನ ಅಗತ್ಯತೆ ಇದೆ. ಅದರ ಬಗ್ಗೆ ನಾವು ಯೋಚನೆ ಮಾಡ್ತಾ ಇದ್ದೇವೆʼʼ ಎಂದು ಹೇಳಿದರು ವಕೀಲ ಶ್ಯಾಮ್ ದಿವಾನ್.
ರೈತರ ಅರ್ಜಿ ಪರಿಗಣಿಸಲು ಒಪ್ಪದ ಸುಪ್ರೀಂಕೋರ್ಟ್: ಈ ನಡುವೆ, ಕರ್ನಾಟಕದ ರೈತರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ಮಾಡಿದ ಮನವಿ, ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಪೀಠ ನಿರಾಕರಿಸಿತು. Sorry, ಕಂಟಿನ್ಯೂ ಎಂದು ನ್ಯಾಯಮೂರ್ತಿಗಳು ಹೇಳಿದರು.
ರಾಜ್ಯಕ್ಕೆ ಬರೆ ಎಳೆಯುವ ತೀರ್ಮಾನ: ಆದರೆ, ಯಾವ ಮಾತುಗಳನ್ನೂ ಕೇಳಲು ಸಿದ್ಧರಿರದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅಂತಿಮವಾಗಿ ರಾಜ್ಯಕ್ಕೆ ಬರೆ ಎಳೆಯುವ ತೀರ್ಮಾನವನ್ನು ಪ್ರಕಟಿಸಿದರು.
ಇತ್ತ ಮೇಕೆದಾಟು ಯೋಜನೆ ಅನುಮತಿ ಕೊಡಬೇಕು ಎಂದು ಕೇಳಿಕೊಂಡಾಗಲೂ ಅದನ್ನು ನೋಡಿಕೊಳ್ಳಲು ಪ್ರಾಧಿಕಾರ ಇದೆಯಲ್ಲ ಎಂಬ ಮಾತನ್ನೇ ನ್ಯಾಯಮೂರ್ತಿಗಳು ಹೇಳಿದರು. ಅಂತಿಮವಾಗಿ ಇನ್ನು 15 ದಿನ ಪ್ರತಿ ದಿನವೂ 5000 ಕ್ಯೂಸೆಕ್ ನೀರು ಬಿಡಬೇಕು. ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿತು. ಬಳಿಕ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.