NEWSದೇಶ-ವಿದೇಶನಮ್ಮರಾಜ್ಯ

ಸಿಬಿಟಿ ಸಭೆಯ ಫಲಿತಾಂಶ ಇಪಿಎಸ್ ನಿವೃತ್ತರ ಪಾಲಿಗೆ ಶೂನ್ಯ: ನಂಜುಡೇಗೌಡ ಬೇಸರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಸದಸ್ಯರ ಬಹು ನಿರೀಕ್ಷಿತ 239ನೇ ಸಿಬಿಟಿ ಸಭೆ ದೆಹಲಿಯಲ್ಲಿ ಮಾ.2ರಂದು ಜರುಗಿದ್ದು, ಈ ಸಭೆಯ ನಿರ್ಣಯವೇನು? ಎಂದು ಹಲವಾರು ಸದಸ್ಯರು ದೂರವಾಣಿ ಕರೆ ಮಾಡಿ, ಮಾಹಿತಿ ಕೋರುತ್ತಿದ್ದು, ಒಟ್ಟಾರೆ ಈ ಸಿಬಿಟಿ ಸಭೆಯ ಫಲಿತಾಂಶ ಇಪಿಎಸ್ ನಿವೃತ್ತರ ಪಾಲಿಗೆ ಶೂನ್ಯ ಎಂದು ಹೇಳಬೇಕಾಗಿದೆ.

ಇನ್ನು ಸಭೆಯ ಪ್ರಸ್ತಾವನೆಯೂ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಅವರು ಪತ್ರಿಕಾ ಹೇಳಿಕೆ ಮೂಲಕ ಸದಸ್ಯರ ಗಮನಕ್ಕೆ ತಂದಿದ್ದಾರೆ.

239ನೇ ಸಿಬಿಟಿ ಸಭೆಯಲ್ಲಿ ನಡೆದ ವಿದ್ಯಮಾನಗಳು ಏನು?: 1) ಇಪಿಎಸ್-95, ಯೋಜನೆ ಬದಲಿಗೆ, ಇಪಿಎಸ್-26 ಯೋಜನೆ ಎಂದು ಮಾರ್ಪಾಡು ಮಾಡುವುದು.

2) ಇಪಿಎಸ್-26, ಯೋಜನೆಯನ್ನು ರೂಪಿಸುವ ಮೂಲಕ 5 ಕೋಟಿ 40 ಲಕ್ಷ ಇಪಿಎಸ್ ಚಂದಾದಾರರನ್ನು ಮುಂದಿನ ದಿನಗಳಲ್ಲಿ ಆಸೆ ಹುಟ್ಟಿಸಿ, ಏನೆಂದು ಸೌಲಭ್ಯ ನೀಡದೆ, ಈಗಿರುವ 82 ಲಕ್ಷ ಈಪಿಎಸ್ ನಿವೃತ್ತ ನೌಕರರ ಗುಂಪಿಗೆ ಸೇರಿಸುವುದೇ ಆಗಿದೆ.

3) ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ, ಇಪಿಎಸ್-26, ಯೋಜನೆಯನ್ನು 239 ನೇ ಸಿಬಿಟಿ ಸಭೆಯಲ್ಲಿ ಮಂಡಿಸಿ, ಅನುಮೋದಿಸುವ ಮೂಲಕ 5 ಕೋಟಿ 40 ಲಕ್ಷ ಉದ್ಯೋಗಿಗಳನ್ನು ಆತಂಕೀಡು ಮಾಡಿದೆ.

4) ಇಪಿಎಸ್-95, ಯೋಜನೆಯನ್ನು ದಶಕಗಳ ಹಿಂದೆ ವ್ಯಾಪಕ ಪ್ರಚಾರದೊಂದಿಗೆ ಜಾರಿ ಮಾಡಿ, ಮುಗ್ಧ ಇಪಿಎಸ್ ಪಿಂಚಿಣಿದಾರರನ್ನು ವಂಚಿಸಿ, ಕೇಂದ್ರ ಸರ್ಕಾರದ ಮಂತ್ರಿ ಮಹೋದಯರು ಇಂದು ನಮ್ಮ ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ.

5) ಅಧಿಕ ಹೆಚ್ಚುವರಿ ಪಿಂಚಣಿ ಕೋರಿ ಸುಮಾರು 17 ಲಕ್ಷ ಇಪಿಎಸ್ ನಿವೃತ್ತರು ಜಂಟಿ ಆಯ್ಕೆ ಪತ್ರ ಸಲ್ಲಿಸಿದ್ದು, 1 ಲಕ್ಷ 24 ಸಾವಿರ ಅರ್ಜಿಗಳನ್ನು ಮಾತ್ರ ಪುರಸ್ಕರಿಸಿ, ಬಾಕಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಇಪಿಎಫ್ಓ ಅಧಿಕಾರಿಗಳು, ಇಪಿಎಸ್ ನಿವೃತ್ತರನ್ನು ಮೃತ್ಯು ಕೂಪಕ್ಕೆ ತಳ್ಳಿರುತ್ತಾರೆ. ಅರ್ಜಿ ಊರ್ಜಿತಗೊಂಡ ನಿವೃತ್ತರಿಗೆ, ನಿವೃತ್ತಿಯ ನಂತರ 12 ತಿಂಗಳ ಸರಾಸರಿ ವೇತನದ ಬದಲಿಗೆ, 60 ತಿಂಗಳ ಸರಾಸರಿ ವೇತನ, ಫ್ರೋರೆಟಾ ಕ್ಯಾಲ್ಕುಲೇಷನ್, ಎಂಬ ಹೊಸ ಸಿದ್ದಾಂತವನ್ನು ಜಾರಿತಂದಿರುತ್ತಾರೆ.

6) ನವಂಬರ್ 04, 2022 ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸುನಿಲ್ ಕುಮಾರ್ ಪ್ರಕರಣದಲ್ಲಿ 2014 ರ ನಂತರ ನಿವೃತ್ತರಾದ ಎಲ್ಲ ನೌಕರರಿಂದ ಜಂಟಿ ಆಯ್ಕೆ ಪತ್ರ ಪಡೆದು, ಅವರಿಗೆ ಅಧಿಕ ಪಿಂಚಣಿಯನ್ನು ನೀಡುವಂತೆ ಆದೇಶಿಸಿದ್ದರೂ ಸಹ, ಈ ತೀರ್ಪಿಗೆ ತಿಲಾಂಜಲಿ ನೀಡಿ, ನಮ್ಮ ಎಲ್ಲಾ ಅರ್ಜಿಗಳನ್ನು ವಜಾ ಗೊಳಿಸಿ, ಅಧಿಕಾರಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ.

7) ಕಳೆದ 12 ವರ್ಷಗಳಿಂದ ಕನಿಷ್ಠ ಪಿಂಚಣಿ 1,000 ರೂ. ನೀಡುತ್ತಿದ್ದು, ಇಪಿಎಸ್ ಕಾಯಿದೆಯಲ್ಲಿ, ಪ್ರತಿ 10 ವರ್ಷಗಳಿಗೊಮ್ಮೆ, ಪಿಂಚಣಿ ಪರಿಷ್ಕರಣೆ ಮಾಡಿ, ವಸ್ತುಗಳ ಬೆಲೆ ಸೂಚಂಕಕ್ಕ ಅನುಗುಣವಾಗಿ ಪಿಂಚಣಿ ನಿಗದಿಪಡಿಸಬೇಕೆಂದು ಸ್ಪಷ್ಟ ಆದೇಶ ಇದ್ದರೂ ಸಹ, ಅಧಿಕಾರಿಗಳು ನಿಯಮಾವಳಿಗಳನ್ನು ಧಿಕ್ಕರಿಸಿ, ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ.

ಈ ಎಲ್ಲ ಮಾಹಿತಿಯನ್ನು ಪ್ರವೀಣ್ ಕೊಹ್ಲಿ ಅವರ ವೆಬ್ ಸೈಟ್‌ನಿಂದ ಪಡೆಯಲಾಗಿದೆ. ಆಧುನಿಕ ಜಗತ್ತಿನಲ್ಲಿ ಇಂತಹ ಮೇರು ವ್ಯಕ್ತಿತ್ವದ ನಾಯಕ ಸಿಗುವುದು ಅಪರೂಪ. ನಿಸ್ವರ್ಥ ಸೇವಾ ಮನೋಭಾವದ ಶ್ರೀಯುತರಿಗೆ ಯಾವುದೇ ಪ್ರಚಾರದ ಗೀಳು ಇಲ್ಲ. ದಿನನಿತ್ಯವೂ ಇವರು ತಮ್ಮ ವೆಬ್‌ಸೈಟ್ ನಲ್ಲಿ ಇಪಿಎಸ್ ನಿವೃತ್ತರಿಗೆ ಸಂಬಂಧಿಸಿದ ಲೇಖನಗಳು, ಆರ್‌ಟಿಐ ಇಂದ ಪಡೆದ ಮಾಹಿತಿ, ವಿವಿಧ ರಾಜ್ಯ ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ನೋಡುತ್ತಿರುತ್ತೇವೆ.

ಆದರೆ ಒಮ್ಮೆಯೂ ಸಹ ಶ್ರೀಯುತರನ್ನು ಭೇಟಿ ಮಾಡಿಲ್ಲ, ಸರಿಯಾಗಿ ಅವರ ಭಾವಚಿತ್ರವನ್ನು ಸಹ ನೋಡಿಲ್ಲ. ಮತ್ತೋರ್ವ ನಾಯಕ ಶಾಮರಾವ್ ಬೀದರ್ ಇವರು ಸಹ ನಿವೃತ್ತರ ಪಾಲಿಗೆ ಎಲೆಮರೆಯ ಕಾಯಿ ಇದ್ದಂತೆ. ಖಡ್ಗದಂತಹ ತನ್ನ ಲೇಖನಿಯಿಂದ ಮಂತ್ರಿ ಮಹೋದಯರು, ಪ್ರಧಾನ ಮಂತ್ರಿಗಳು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ರಾಷ್ಟ್ರಪತಿಗಳು ಸೇರಿದಂತೆ, ಲೆಕ್ಕವಿಲ್ಲದಷ್ಟು ಪತ್ರಗಳನ್ನು ಇಪಿಎಸ್ ನಿವೃತ್ತರ ಪರ ಬರೆದಿದ್ದು, ಈ ಇಬ್ಬರು ನಾಯಕರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಇನ್ನು ಈ ನಡುವೆ ಸ್ವಾಭಿಮಾನಿ ಸಂಸ್ಥೆಯ ನಿವೃತ್ತರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ಹೋರಾಟವನ್ನು ಮುಂದುವರಿಸೋಣ ಎಂದು ನಂಜುಂಡೇಗೌಡ ಕರೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!