NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿ ಎಲ್ಲ ಬೇಡಿಕೆಗಳ ಕುರಿತು ಪರಿಶೀಲನೆ: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ
  • ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಂಜೆ ಸಾರಿಗೆ ನೌಕರರ ಸಂಘಟನೆಗಳ ಸಭೆ 
  • ಬೇಡಿಕೆಗಳ ಈಡೇರಿಕೆ ಕುರಿತಾಗಿ ಅತೀ ಶೀಘ್ರದಲ್ಲೇ ಇನ್ನೊಮ್ಮೆ  ಸಂಘಟನೆಗಳೊಂದಿಗೆ ಸಭೆ

ಬೆಂಗಳೂರು: ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿರಲಿದೆ. ಹೀಗಾಗಿ ನಾವು ಎಂದೆಂದಿಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಪರವಾಗಿದ್ದೇವೆ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಅತೀ ಶೀಘ್ರದಲ್ಲೇ ಮತ್ತೊಂದು ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಂಜೆ ಆಯೋಜಿಸಿದ್ದ ತಮ್ಮ ಅಧ್ಯಕ್ಷತೆಯಲ್ಲಿನ ಸಾರಿಗೆ ಒಕ್ಕೂಟ ಹಾಗೂ ಕಾರ್ಮಿಕ ಸಂಘಟನೆಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿರಲಿದೆ ಎಂದು ತಿಳಿಸಿದರು.

ಇನ್ನು ಹಿಂದಿನ ಸರ್ಕಾರ ಸುಮಾರು ₹4 ಸಾವಿರ ಕೋಟಿ ರೂ. ಬಾಕಿ ಬಿಲ್ಲುಗಳನ್ನು ಉಳಿಸಿ ಹೋಗಿದೆ. ಇದು ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡಿದೆ. ಸರ್ಕಾರದ ಇತಿಮಿತಿಯ ಒಳಗಾಗಿ ತಮ್ಮ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಇನ್ನು ಪ್ರಮುಖವಾಗಿ ಸಾರಿಗೆ ನೌಕರರ ಒಕ್ಕೂಟದ ಹಾಗೂ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಾದ ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿದಂತೆ ಎಲ್ಲ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆ ಕುರಿತಾಗಿ ಇನ್ನೊಮ್ಮೆ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆಯನ್ನು ಆದಷ್ಟು ಬೇಗನೆ ಕರೆಯಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಂಸ್ಥೆಗೆ ₹4ಸಾವಿರ ಕೋಟಿಯಷ್ಟು ಮೊತ್ತವನ್ನು ಹಿಂದಿನ ಸರ್ಕಾರ ಬಾಕಿ ಉಳಿಸಿ ಹೋಗಿತ್ತು. ಆದರೂ ಸಂಸ್ಥೆಯನ್ನು ಬಲಪಡಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಈಗ ಕೈಗೊಂಡಿದೆ ಎಂದು ವಿವರಿಸಿದರು.

ಇನ್ನು ನೌಕರರಿಗೆ ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ₹350 ಕೋಟಿ ಸಾಲವನ್ನು ಪಡೆಯಲು ಸಂಸ್ಥೆಗೆ ಅನುಮತಿ ನೀಡಲಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು 2 ಸಾವಿರ ಬಸ್‌ಗಳನ್ನು ಹೊಸದಾಗಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖವಾಗಿ ಚಾಲಕ ಮತ್ತು ನಿರ್ವಾಹಕರ ಮಾದರಿಯಲ್ಲಿ ಮೆಕ್ಯಾನಿಕ್‌ಗಳ ನೇಮಕಾತಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಡಲಿದೆ ಎಂದು ಹೇಳಿದರು.

Deva
the authorDeva

Leave a Reply

error: Content is protected !!