NEWSನಮ್ಮಜಿಲ್ಲೆನಮ್ಮರಾಜ್ಯ

ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್‌ ವಿತರಿಸಿದ ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆಶಿ ಸಾಥ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ಇಂದು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬಿಎಂಟಿಸಿ ಬಸ್‌ನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರಮೇ 20 ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆಯನ್ನು 2023ರ ಜೂನ್ 11ರಿಂದ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‍ಡಬ್ಲ್ಯೂಕೆಆರ್‌ಟಿಸಿ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ರಾಜ್ಯದ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಪ್ರತಿನಿತ್ಯ ಒಂದು ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 80 ಲಕ್ಷ ಇದ್ದು, ‘ಶಕ್ತಿ ಯೋಜನೆ’ಯಡಿ ಪ್ರತಿನಿತ್ಯ 20 ಕೋಟಿ ರೂ.ಗಳಷ್ಟು ಉಚಿತ ಟಿಕೆಟನ್ನು ಮಹಿಳೆಯರಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಸಿಎಂ ಟಿಕೆಟ್‌ ವಿತರಿಸುತ್ತಿದ್ದ ವೇಳೆ ಜತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾಥ್‌ ನೀಡಿದರು.

ಇನ್ನು ಸಿಎಂ ಮಧ್ಯಾಹ್ನ  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ   ಕೆಕೆಆರ್‌ಟಿಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿದರು.

Megha
the authorMegha

Leave a Reply

error: Content is protected !!