CRIMENEWSನಮ್ಮಜಿಲ್ಲೆ

ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವರುಣ ಗ್ರಾಪಂ ಕಾರ್ಯದರ್ಶಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ- ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರುಣ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮೈಸೂರು ನಗರದ ಹೂಟಗಳ್ಳಿ ನಿವಾಸಿ, ವರುಣ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಯದರ್ಶಿ ದಿವ್ಯಾ ಅವರು ಎಂದಿನಂತೆ ಶುಕ್ರವಾರ ಬೆಳಗ್ಗೆ ಕಚೇರಿಗೆ ಬಂದ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಅಸ್ವಸ್ಥರಾಗಿದ್ದಾರೆ. ಈ ವಿಚಾರವನ್ನು ಡೇಟಾ ಎಂಟ್ರಿ ಆಪರೇಟರ್ ಅವರು ಪಿಡಿಒ ಕುಮಾರ್ ಆರಾಧ್ಯ ಅವರಿಗೆ ತಿಳಿಸಿದ್ದಾರೆ.

ಕೂಡಲೇ ಅವರನ್ನು ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಿದ ಬಳಿಕ ಶನಿವಾರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಮುಂದುವರಿದಿದ್ದು ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ದಿವ್ಯಾ ಅವರು ಪ್ಯಾರಸಿಟಮಲ್ ಸೇರಿದಂತೆ ಇತರೆ 13 ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದ ವೈದ್ಯರು, ದಿವ್ಯಾ ಅವರು ಸೇವಿಸಿದ್ದ ಮಾತ್ರೆಯಲ್ಲಿನ ವಿಷಕಾರಿ ಅಂಶವನ್ನು ಹೊರ ತೆಗೆದಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಿವೇಶನವೊಂದರ ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಹದ್ಯೋಗಿ ಜತೆ ಜಟಾಪಟಿ ನಡೆಯುತ್ತಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ದಿವ್ಯಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಸದ್ಯ ಕಾರ್ಯದರ್ಶಿ ಅವರು ಚೇತರಿಸಿಕೊಳ್ಳುತ್ತಿದ್ದು, ಆತ್ಯಹತ್ಯೆ ಯತ್ನ ಕಾರಣದ ಬಗ್ಗೆ ಪೊಲೀಸರಿಗೆ ಯಾವುದೇ ಹೇಳಿಕೆ ನೀಡಿಲ್ಲ.

Megha
the authorMegha

Leave a Reply

error: Content is protected !!