ಸಿಎಂ ಸಾರ್ ನಮಗೂ KSRTC ಬಸ್ ಬಿಡಿ: ಸ್ವಾತಂತ್ರ್ಯ ಸಿಕ್ಕಿ 80ವರ್ಷವಾದರೂ ಇನ್ನೂ ಸರ್ಕಾರಿ ಬಸ್‌ಗಳನ್ನೇ ಕಾಣದ ಪಾವಗಡ ತಾಲೂಕಿನ ಹಲವು ಗ್ರಾಮಗಳ ಜನ!?

ತುಮಕೂರು: ಕೈಗಾರಿಕೆ ಸೇರಿದಂತೆ ವಾಣಿಜ್ಯವಾಗಿಯೂ ಇತ್ತೀಚೆಗೆ ಅತಿ ವೇಗವಾಗಿ ಬೆಳೆಯುತ್ತಿದೆ ತುಮಕೂರು ಜಿಲ್ಲೆ. ಆದರೆ, ಪಾವಗಡ ತಾಲೂಕಿನ, ಮದ್ದೆ, ಹರಿಹರಪುರ, ಕೊತ್ತೂರು, ಕನ್ಮೆಡಿ, ಬ್ಯಾಡನೂರು, ಶೈಲಾಪುರ, ಬೆಳ್ಳಿಬಟ್ಲು ಸೇರಿ ಈ ಭಾಗದ ಹಲವು ಗ್ರಾಮಗಳಿಗೆ ಈವರೆಗೆ ಸರ್ಕಾರಿ ಬಸ್‌ಗಳ ಸೌಲಭ್ಯವಿಲ್ಲದಿರುವುದು ಇಲ್ಲಿನ ಜನಪ್ರತಿನಿಧಿಗಳ ನಡೆಯನ್ನು ಬಿಂಬಿಸುತ್ತಿದೆ.

ಹೌದು! ದೇಶಕ್ಕೆ ಸ್ವಾಂತಂತ್ರ್ಯ ಬಂದು 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ಸಹ ಈವರೆಗೂ ಸರ್ಕಾರಿ ಬಸ್‌ಗಳನ್ನೇ ಕಾಣದ ಗ್ರಾಮಗಳು ಇವೆ ಎಂದರೆ ನಮ್ಮನಾಳುತ್ತಿರುವ ಜನ ಪ್ರತಿನಿಗಳಿಗೆ ನಾಚಿಕೆಯಾಗಬೇಕು.
ಇನ್ನು ಪಾವಗಡ ತಾಲೂಕಿನ ಹತ್ತು ಹಲವು ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಾವಗಡ ತಾಲೂಕಿನ ವಿ.ಎಚ್.ಪಾಳ್ಯದ ಮಾಹಿತಿ ಹಕ್ಕು ಕಾರ್ಯಕರ್ತ ಎನ್.ಶ್ರೀನಿವಾಸ ಪತ್ರ ಬರೆಯುವ ಮೂಲಕ ಲಿಖಿತವಾಗಿ ಮನವಿ ಮಾಡಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲೇನಿದೆ?: ದೇಶಕ್ಕೆ ಸ್ವಾಂತಂತ್ರ್ಯ ಬಂದು 79 ವರ್ಷ ಕಳೆದು 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ಸಹ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ, ಮದ್ದೆ, ಹರಿಹರಪುರ, ಕೊತ್ತೂರು, ಕನ್ಮೆಡಿ, ಬ್ಯಾಡನೂರು, ಶೈಲಾಪುರ, ಬೆಳ್ಳಿಬಟ್ಲು, ಇತ್ಯಾದಿ ಗ್ರಾಮಗಳಿಗೆ ಈವರೆಗೆ ಸರ್ಕಾರಿ ಬಸ್ಸುಗಳ ಸೌಲಭ್ಯವಿಲ್ಲ.
ಈ ಗ್ರಾಮಗಳಿಂದ ಪ್ರತಿ ನಿತ್ಯ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ ಹಾಗೂ ರಾಜಧಾನಿ ಬೆಂಗಳೂರಿಗೆ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ವಿಕಲಚೇತನರು, ವಯೋವೃದ್ಧರು ಕಚೇರಿ ಕೆಲಸ, ಶಾಲಾ ಕಾಲೇಜು, ಉದ್ಯೋಗಕ್ಕೆ ಹೋಗಿ ಬರುತ್ತಾರೆ. ಆದರೆ ಇವರಿಗೆಲ್ಲ ಯಾವುದೆ ಸರ್ಕಾರಿ ಬಸ್‌ಗಳ ಸೌಲಭ್ಯವಿಲ್ಲ ಹೀಗಾಗಿ ಇವರೆಲ್ಲ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಇನ್ನು ಖಾಸಗಿ ಬಸ್ಸುಗಳ ಕಪಿಮುಷ್ಟಿಯಲ್ಲಿ ಸಾರಿಗೆಯ ಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದಾರೆ. ಇತ್ತ ಈ ಕ್ಷೇತ್ರದ ಶಾಸಕರಿಗೂ ತನ್ನ ಮತ ಕ್ಷೇತ್ರದ ಗ್ರಾಮಗಳಿಗೆ ಕನಿಷ್ಠ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಿಕೊಡಬೇಕೆಂಬ ಸಾಮಾನ್ಯ ಜ್ಞಾನವೂ ಸಹ ಇಲ್ಲ.
ಪಾವಗಡ ತಾಲೂಕು ಆಡಳಿತಾತ್ಮಕವಾಗಿ ತುಮಕೂರು ಜಿಲ್ಲೆಗೆ ಸೇರಿದ್ದರೂ ಸಹ ಲೋಕಸಭಾ ಕ್ಷೇತ್ರ ಚಿತ್ರದುರ್ಗಕ್ಕೆ ಸೇರಿದೆ. ಇಲ್ಲಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಈ ಕ್ಷೇತ್ರದ ಕಡೆಗೆ ಈವರೆಗೂ ತಿರುಗಿ ನೋಡಿಲ್ಲ. ಶ್ರೀಸಾಮಾನ್ಯನ ಕಷ್ಟ ಸುಖಗಳ ಬಗ್ಗೆ ತಾಲೂಕು, ಹೋಬಳಿ ಮಟ್ಟದ ಸಭೆಗಳನ್ನು ನಡೆಸಿಲ್ಲ.
ಹೀಗಾಗಿ ತಾವು ಮುಖ್ಯಮಂತ್ರಿಗಳೇ ಪಾವಗಡ ತಾಲೂಕಿನ ಮತದಾರರು ಕಾಂಗ್ರೇಸ್ ಪಕ್ಷದ ಶಾಸಕರನ್ನೇ (ಎಚ್.ವಿ.ವೆಂಕಟೇಶ್ ) ವಿಧಾನ ಸಭೆಗೆ ಚುನಾಯಿಸಿ ಕಳುಹಿಸಿದ್ದಾರೆ. ತಮ್ಮ ಪಕ್ಷದವರೇ ಆದ ಈ ಕ್ಷೇತ್ರದ ಶಾಸಕ ಎಚ್.ವಿ.ವೆಂಕಟೇಶ್ ಅವರನ್ನು ಕರೆದು ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಮುಖ್ಯಮಂತ್ರಿಯಾಗಿ ತಾವು ಸಭೆ ಕರೆದು ವಿಚಾರಿಸಿ ಅಥವಾ ನಮ್ಮ ಕ್ಷೇತ್ರದ ಶಾಸಕರು ತಮಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಮಗೆ ಮನವಿ ಸಲ್ಲಿಸಿದ್ದಾರೆಯೇ. ಒಂದು ವೇಳೆ ಮನವಿ ಸಲ್ಲಿಸಿದ್ದರೆ ಅದನ್ನು ಪರಿಶೀಲಿಸಿ ಎಂದು ಮನವಿ.
ಮುಖ್ಯ ಮಂತ್ರಿಯವರೇ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ, ರಾಜ್ಯದ ಮಹಿಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ್ದೀರಿ. ರಾಜ್ಯದ ಮಹಿಳೆಯರ ಪರವಾಗಿ ತಮಗೆ ಅಭಿನಂದನೆ. ಆದರೆ ಈ ನಮ್ಮ ಗ್ರಾಮಗಳ ಮಹಿಳೆಯರು, ವಿದ್ಯಾರ್ಥಿನಿಯರು, ವಯೋವೃದ್ಧರು, ವಿಕಲಚೇತನರು, ಯಾವ ಪಾಪ ಮಾಡಿದ್ದಾರೆ. ಇವರಿಗೆ ಏಕೆ ಉಚಿತ ಬಸ್ ಸೌಲಭ್ಯ ಕಲ್ಪಿಸಿಲ್ಲ ತಾವು.
ಮುಖ್ಯಮಂತ್ರಿಯಾದ ತಾವು ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಬಸ್ ಸೇವೆ ರಾಜ್ಯದ ಎಲ್ಲ ಗ್ರಾಮಗಳ ಮಹಿಳೆಯರಿಗೆ/ ವಿದ್ಯಾರ್ಥಿನಿಯರಿಗೆ, ವಯೋವೃದ್ದಾರಿಗೆ, ವಿಕಚೇತನರಿಗೆ ಸೌಲಭ್ಯ ದೊರಕುತ್ತಿದೆಯಾ ಇಲ್ಲವೋ ಎಂದು ನಿಮ್ಮ ಸಾರಿಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದೀರಾ? ತಾವೇನು 600ನೇ ಕೋಟಿ ಉಚಿತ ಟಿಕೆಟನ್ನು ಮಹಿಳೆಗೆ ನೀಡುವ ಮೂಲಕ ಪ್ರಚಾರ ಪಡೆದಿರಿ. ಆದರೆ ಈ ಗ್ರಾಮಗಳಿಗೆ ತಾವು ಯಾವಾಗ ನ್ಯಾಯ ದೊರಕಿಸಿವುದು?
ಮುಖ್ಯಮಂತ್ರಿಯವರೇ, ತಮ್ಮನ್ನು ಪಾವಗಡ ತಾಲೂಕಿಗೆ ಗೌರವಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ. ಈ ಗ್ರಾಮಗಳಿಗೆ ಸರ್ಕಾರಿ ಬಸ್‌ಗಳನ್ನು ನೀಡಿ ತಾವೇ ಉದ್ಘಾಟನೆ ಮಾಡುವ ಮೂಲಕ ತಾಲೂಕಿನ ಶಕ್ತಿ ಯೋಜನೆ ಉಚಿತ ಬಸ್ ಸೇವೆ ವಂಚಿತ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ವಯೋವೃದ್ಧಗೆ ತಾವು ನ್ಯಾಯ ಒದಗಿಸುತ್ತೀರಿ ಎಂಬ ಭರವಸೆಯಿಂದ ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಈ ನನ್ನ ಮನವಿಯನ್ನು ತಾವು ಅಂಬೇಡ್ಕರ್ ಸಂವಿಧಾನ, ಸಮಾನತೆ, ಸರ್ವರಿಗೂ ಸಮಪಾಲು ತತ್ವದಡಿ ಅಗತ್ಯ ಕ್ರಮ ಕೈಗೊಂಡು ಸರ್ಕಾರಿ ಬಸ್ ಸೌಲಭ್ಯವಿಲ್ಲದ ಈ ನಮ್ಮ ಗ್ರಾಮಗಳಿಗೆ ಬಸ್‌ಗಳನ್ನು ತಮ್ಮ ಸಮಕ್ಷಮದಲ್ಲೇ ಚಾಲನೆ ಮಾಡುವ ಮೂಲಕ ತಾಲೂಕಿನ ಜನರ ಋಣ ತೀರಿಸಬೇಕೆಂದು ತಮ್ಮನ್ನು ವಿನಮ್ರತೆಯಿಂದ ಕೋರುತ್ತೇನೆ ಎಂದು ಶ್ರೀನಿವಾಸ ಸಿಎಂ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
Related









