CRIMENEWSಸಿನಿಪಥ

‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿನ್ನರ್ ರಾಕೇಶ್ ಪೂಜಾರಿ ವಿಧಿವಶ

ವಿಜಯಪಥ ಸಮಗ್ರ ಸುದ್ದಿ

ಉಡುಪಿ: ‘ಕಾಮಿಡಿ ಕಿಲಾಡಿಗಳು ಸೀಸನ್ 3’ (Comedy Khiladigalu Season 3) ವಿನ್ನರ್, ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ರಾಕೇಶ್ ಪೂಜಾರಿ ವಿಧಿವಶರಾಗಿದ್ದಾರೆ.

ಅವರು ಕಳೆದ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. ನಿನ್ನೆಯಷ್ಟೇ ಕಾಂತಾರ ಪ್ರಿಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಾಕೇಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿನ್ನೆಯೇ ಪಾಲ್ಗೊಂಡಿದ್ದರು. ಸ್ನೇಹಿತರ ಜತೆ ಇದ್ದಾಗ ಹೃದಯಘಾತ ಸಂಭವಿಸಿದೆ. ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು ಎಂಬ ಮಾಹಿತಿ ಇದೆ.

ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಬಳಿಕ ಅವರು ನಿಧನ ಹೊಂದಿದ್ದಾರೆ ಎಂದು ವೈದ್ಯರು ಖಚಿಪಡಿಸಿದ್ದಾರೆ.

ಮಧ್ಯರಾತ್ರಿ 1 ಗಂಟೆಗೆ ಇಹಲೋಕ ತ್ಯಜಿಸಿರೋ ರಾಕೇಶ್, ಕೊನೆಯದಾಗಿ ದಸ್ತಕ್ ಸಿನಿಮಾದ ಪ್ರೀಮಿಯರ್ ಶೋ ನಲ್ಲಿ ಭಾಗಿಯಾಗಿದ್ರು. ಅಲ್ಲದೇ ಇತ್ತೀಚೆಗಷ್ಟೇ ಆಕ್ಸಿಡೆಂಟ್ ಆಗಿತ್ತು, ಆದರೆ ಹೆಲ್ತ್ ಇಶ್ಯೂ ಇರಲಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ ರಾಕೇಶ್ ಪೂಜಾರಿ. ಇವರು ತಮ್ಮ ಶಾಲಾ ಶಿಕ್ಷಣವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದಿದ್ದರು. ರಾಕೇಶ್ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಡ್ಲೆ ಬಜಿಲ್ ತುಳು ಕಾರ್ಯಕ್ರಮದಲ್ಲಿ ನಟಿಸಿದ್ದರು.

ಅವರು ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡದಲ್ಲಿ ಮತ್ತು ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳುವಿನಲ್ಲಿ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ಬಲೆ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಯೆ ಪೋಯೆ ಮುಂತಾದ ಕರಾವಳಿ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಸೀಸನ್ 3ರ ವಿಜೇತರಾಗಿ ಗಮನ ಸೆಳೆದ ರಾಕೇಶ್, ಹಾಸ್ಯಪ್ರಿಯ ವ್ಯಕ್ತಿತ್ವದಿಂದ ಅಭಿಮಾನಿಗಳ ಮನ ಗೆದ್ದಿದ್ದರು. ಕಿರುತೆರೆಯ ಜತೆ ಜತೆಗೆ ಚಿತ್ರರಂಗದಲ್ಲೂ ಅವರು ನಟನ ಚಾತುರ್ಯ ಮೆರೆದಿದ್ದರು. ಇನ್ನು ರಾಕೇಶ್ ಅವರ ಅಗಲಿಕೆ ಕನ್ನಡ ರಂಗಭೂಮಿ ಮತ್ತು ಕಿರುತೆರೆಗೆ ಭಾರಿ ನಷ್ಟವಾಗಿದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಈ ದುಃಖದ ಸುದ್ದಿ ಕೇಳಿ ಶೋಕದಲ್ಲಿ ಮುಳುಗಿದ್ದಾರೆ.

ರಾಕೇಶ್ ಪೂಜಾರಿ ಅವರ ನಿಧನದಿಂದ ಎಲ್ಲರಿಗೂ ಶಾಕ್‌ ಆಗಿದ್ದು, ಅದೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ‘ಮಿಸ್ ಯೂ ಮಗನೇ.. ನಾನು ಇನ್ಯಾವತ್ತೂ ನಿನ್ನ ಜತೆ ಮಾತನಾಡಲು ಆಗಲ್ಲ, ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯಲ್ಲಿ ನೆಲೆಸಿರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾವು ಸಂಭವಿಸುವುದಕ್ಕೂ ಮೊದಲು ಏನಾಗಿತ್ತು ಎಂದು ಅವರ ಆಪ್ತ ಹಾಗೂ ನಟ ಗೋವಿಂದೇಗೌಡ (ಜಿಜಿ) ವಿವರಿಸಿದ್ದಾರೆ. ರಾಕೇಶ್ ಅವರು ಮೇ 11ರ ಬೆಳಗ್ಗೆ ‘ಕಾಂತಾರ: ಚಾಪ್ಟರ್ 1’ ಶೂಟ್​ನಲ್ಲಿ ಇದ್ದರು. ಆ ಬಳಿಕ ಸಂಜೆ ಆಪ್ತರೊಬ್ಬರ ಮೆಹಂದಿ ಶಾಸ್ತ್ರಕ್ಕೆ ಹೋಗಿದ್ದಾರೆ. ಮಧ್ಯ ರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿದೆ. ರಾಕೇಶ್​ಗೆ ಇತ್ತೀಚೆಗೆ ಅಪಘಾತ ಸಂಭವಿಸಿತ್ತು. ಆದರೆ, ಯಾವುದೇ ಹೆಚ್ಚಿನ ತೊಂದರೆ ಆಗಿರಲಿಲ್ಲ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇರಲಿಲ್ಲ ಎಂದು ಜಿಜಿ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!