ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ

ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್‌ಎನ್‌ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅನಿರೀಕ್ಷಿತ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ನೋಡಿದರು.
ತಪಾಸಣೆ ವೇಳೆ ಮೇಲ್ವಿಚಾರಕ ಬಾಲಾಜಿ ಎಂಬುವರು ಗೈರುಹಾಜರಾಗಿದ್ದು, ಸ್ಥಳದಲ್ಲಿದ್ದ ಮತ್ತೊಬ್ಬ ಮೇಲ್ವಿಚಾರಕ ಕೆ. ಸುರೇಶ್ ಕುಮಾರ್ ಅವರನ್ನು ಕರೆದು ಎಷು ಮಂದಿ ಪೌರಕಾರ್ಮಿಕರು ಬಂದಿದ್ದಾರೋ ಅವರ ಹಾಜರಾತಿ ತೆಗೆದುಕೊಳ್ಳುವಂತೆ ತಿಳಿಸಿದರು.
ಈ ವೇಳೇ ಒಟ್ಟು 48 ಜನ ಪೌರಕಾರ್ಮಿಕರಲ್ಲಿ 15 ಜನ ಪೌಕಾರ್ಮಿಕರು ಗೈರುಹಾಜರಾಗಿದ್ದರು. ಹಾಜರಿದ್ದ ಪೌರಕಾರ್ಮಿಕರನ್ನು ಮಸ್ಟರಿಂಗ್ ಕೇಂದ್ರದಿಂದ ಸ್ವಚ್ಛತಾ ಕಾರ್ಯ ನಿರ್ವಹಿಸಲು ಕಳುಹಿಸಿದರು. ಬಳಿಕ ಮೇಲ್ವಿಚಾರಕರಿಗೆ ಗೈರುಹಾಜರಾದ ಪೌರಕಾರ್ಮಿಕರನ್ನು ಗುರುತಿಸಲು ತಿಳಿಸಿದರು. ಅದರಲ್ಲಿ ಮೇಲ್ವಿಚಾರಕ ಸುರೇಶ್ ಕುಮಾರ್ 15 ಜನರನ್ನು ಗುರುತಿಸಿದರು.
ತದನಂತರ ಪೌರಕಾರ್ಮಿಕರಲ್ಲಿ ಒಬ್ಬರನ್ನು ಕರೆದು ಗೈರುಹಾಜರಾದವರನ್ನು ಪ್ರಾಮಾಣಿಕವಾಗಿ ಗುರುತಿಸಲಾಗಿದೆಯೇ ಎಂದು ಕೇಳಿದರು. ಆಗ ಮೇಲ್ವಿಚಾರಕರು ಹಾಜರಿದ್ದ 6 ಜನರನ್ನು ತಪ್ಪಾಗಿ ಗೈರುಹಾಜರೆಂದು ಗುರುತಿಸಿದ್ದಾರೆ ಹಾಗೂ ಈತನಿಗೆ ತಮ್ಮ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಹೆಸರುಗಳೇ ತಿಳಿದಿಲ್ಲ ಎಂದು ಆಯುಕ್ತರು ಗಮನಿಸಿದರು.
ಈ ವೇಳೆ ಮೇಲ್ವಿಚಾರಕರಾದ ಬಾಲಾಜಿ ಮತ್ತು ಸುರೇಶ್ ಕುಮಾರ್ ಈ ಇಬ್ಬರ ಮೇಲೂ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಲ್ಯಾಕ್ ಸ್ಪಾಟ್‌ಗಳ ಸ್ವಚ್ಛತೆ ಹಾಗೂ ಸೌಂದರೀಕರಣ: ಆಯುಕ್ತರು ಮತ್ತು ಅಪರ ಆಯುಕ್ತ (ಅಭಿವೃದ್ಧಿ) ಅವರ ನಿರಂತರ ಸ್ಥಳ ಪರಿಶೀಲನೆ ಹಾಗೂ ನಿರ್ದೇಶನದ ಮೇರೆಗೆ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ, ಕಸ ತೆರವು ಕಾರ್ಯಾಚರಣೆ ನಡೆಸಿ ಸೌಂದರೀಕರಣ ಕಾರ್ಯವು ಚುರುಕುಗೊಂಡಿದ್ದು ಒಳ್ಳೆ ಕೆಲಸ ನಡೆಯುತ್ತಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ತಪಾಸಣೆ ವೇಳೆ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಹಾಗೂ ಘನತ್ಯಾಜ್ಯ ನಿರ್ವಹಣೆಯ ಅಭಿಯಂತರರು ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.
Related








