NEWSನಮ್ಮಜಿಲ್ಲೆಬೆಂಗಳೂರು

ಜಕ್ಕೂರು ರೈಲ್ವೆ ಮೇಲ್ಸೇತುವೆ 3 ತಿಂಗಳಲ್ಲಿ ಪೂರ್ಣಗೊಳಿಸಿ: ಗುತ್ತಿಗೆದಾರರಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಾಕೀತು

ವಿಜಯಪಥ ಸಮಗ್ರ ಸುದ್ದಿ
  • 3.5 ಟನ್ ಪ್ಲಾಸ್ಟಿಕ್ ವಶಪಡಿಸಿಕೊಂಡು 1.5 ಲಕ್ಷ ರೂ. ವಿಧಿಸಲಾಗಿದೆ.

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲು ಉತ್ತರ ನಗರಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉತ್ತರ ನಗರ ಪಾಲಿಕೆಯಲ್ಲಿ ಇಂದು ಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಜಕ್ಕೂರು ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಸಮಸ್ಯೆಯನ್ನು ಬಗೆಹರಿದಿದೆ. ಎರಡೂ ಕಡೆಯ ರ‍್ಯಾಂಪ್ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಇನ್ನು ಜಕ್ಕೂರು ರೈಲ್ವೇ ಸಮಾಂತರ ರಸ್ತೆ (ಬಳ್ಳಾರಿ ರಸ್ತೆಯನ್ನು ಸಂಪರ್ಕಿಸುವ ರಸ್ತೆ) ಪರಿಶೀಲಿಸಿ, ಹೊಸ ರಸ್ತೆಯ ನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ರೈಲ್ವೇ ಸಮಾಂತರ ರಸ್ತೆಯಾದ ಎಂ.ಸಿ.ಇ.ಸಿ.ಹೆಚ್.ಎಸ್ ಹಂತ-2, ಮೇಸ್ತ್ರಿಪಾಳ್ಯ-ರಾಚೇನಹಳ್ಳಿ ಲಿಂಕ್ ರಸ್ತೆಗಳಲ್ಲಿ ಡಾಂಬರೀಕರಣ ಮತ್ತು ಎರಡೂ ಬದಿಯ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಬೇಕು ಎಂದರು.

ರಾಯಲ್ ಎನ್‌ಕ್ಲೇವ್ ಲೇಔಟ್‌ನಲ್ಲಿ ಮನೆ-ಮನೆ ಕಸ ಸಂಗ್ರಹಣಾ ಕಾರ್ಯವನ್ನು ಪರಿಶೀಲಿಸಿ, ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಜೊತೆಗೆ ಪ್ರತಿನಿತ್ಯ ಆಟೋ ಟಿಪ್ಪರ್ ಗಳನ್ನು ಮನೆ-ಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸಲು ತಿಳಿಸಿದರು.

ವರ್ಚ್ಯುವಲ್ ಮೂಲಕ ಅಧಿಕಾರಿಗಳ ಜತೆ ಸಭೆ: ಮಳೆಯಿಂದ ಆಗುವ ಅನಾಹುತ ತಡೆಗಟ್ಟುವ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಹಾಗೂ ಇ-ಖಾತಾ ಅರ್ಜಿಗಳ ವಿಲೇವಾರಿ ಮಾಡುವ ಕುರಿತು ವರ್ಚ್ಯುವಲ್ ಮೂಲಕ ಸಭೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

Advertisement

3.5 ಟನ್ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಹಾಗೂ 1.5 ಲಕ್ಷ ರೂ. ದಂಡ: ಬೆಂಗಳೂರು ಉತ್ತರ ನಗರ ಪಾಲಿಕೆ ದಾಸರಹಳ್ಳಿಯ ಭೈರವವೇಶ್ವರ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಗೋಡನ್ ಗೆ ಎ.ಜಿ.ಎಂ ಆದ ಪವನಾ ನೇತೃತ್ವದ ತಂಡವು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಏಕ ಬಳಕೆಯ 3.5 ಟನ್ ಪ್ಲಾಸ್ಟಿಕ್ ವಶಪಡಿಸಿಕೊಂಡು 1.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮತ್ತೆ ಇದೇ ಮರುಕಳಿಸಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಅಭಿಯಂತರರಾದ ಸುಧಾಕರ್, ನಾಗಪ್ಪ ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!