ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಜೆಸಿ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜೆಸಿ ರಸ್ತೆಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಸ್ಥಳಕ್ಕೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದ ಅವರು, ರಸ್ತೆಯ ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ 1 ಕಿ.ಮೀ ಉದ್ದದ ರೆಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆಯ ಅರ್ಧ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಿ ಉಳಿದರ್ಧ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುವುದನ್ನು ಗಮನಿಸಿ, ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೆಂಕು ಎಂದು ಹೇಳಿದರು.
15 ಮೀ. ರಸ್ತೆಯ ಅಗಲ ಹಾಗೂ ಕನಿಷ್ಠ 2.50 ಮೀ. ಅಗಲದ ಪಾದಚಾರಿ ಮಾರ್ಗ: ಕಾಮಗಾರಿ ನಡೆಸುವ ವೇಳೆ ಬಫರ್ ಜೋನ್ ಒಳಗೊಂಡಂತೆ ಎಲ್ಲಾ ಕಡೆಗಳಲ್ಲಿ 15 ಮೀ. ರಸ್ತೆಯ ಅಗಲವನ್ನು ಹಾಗೂ 2.50 ಮೀ. ಗಿಂತ ಕಡಿಮೆ ಇರದಂತೆ ಪಾದಚಾರಿ ಮಾರ್ಗದ ಅಗಲ ಇರುವಂತೆ ರಸ್ತೆ ನಿರ್ಮಿಸಲು ಕಟ್ಟುನಿಟ್ಟಿನ ಆದೇಶ ಮಾಡಿದರು.
ರಸ್ತೆಯ ಎರಡೂ ಬದಿಯಲ್ಲಿ ಮಳೆ ನೀರು ಕೊಳವೆ ನಿರ್ಮಾಣ: ರಸ್ತೆಯ ಮೇಲೆ ನೀರು ನಿಂತು ಸಮಸ್ಯೆಗಳಾಗದಂತಿರಲು ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಗಾಲುವೆಗಾಗಿ 1000 ಮೀ. ವ್ಯಾಸದ ಆರ್.ಸಿ.ಸಿ ಎನ್.ಪಿ-3 ಕೊಳವೆ ಮಾರ್ಗ ಹಾಗೂ ಹೆಚ್.ಡಿ.ಪಿ.ಇ ಡಕ್ಟ್ ವಿದ್ಯುತ್ ಕೇಬಲ್ಗಾಗಿ 200 ಮೀ. ವ್ಯಾಸದ 3 ಸಂಖ್ಯೆ ಹಾಗೂ ಓ.ಎಫ್.ಸಿ ಕೇಬಲ್ಗಾಗಿ 100 ಮೀ. ವ್ಯಾಸದ 2 ಸಂಖ್ಯೆ ಅಳವಡಿಸಲಾಗಿದೆ. ಇನ್ನೂ ಜಲಮಂಡಳಿಯ ವತಿಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಒಳಚರಂಡಿ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಕೊಳವೆ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ.
ಅ.31 ರೊಳಗಾಗಿ ಕಾಮಗಾರಿ ಪೂರ್ಣ: ಜೆಸಿ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಸೆಪ್ಟೆಬಂರ್ 2 ರಂದು ಬಿ-ಸ್ಮೈಲ್ ಗೆ ಹಸ್ತಾಂತರಿಸಲಾಯಿತು. ಆ ಬಳಿಕ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕಾಮಗಾರಿಗೆ ವೇಗ ನೀಡಲಾಗಿದೆ. ಒಂದು ಭಾಗದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಸೆಪ್ಟೆಂಬರ್ 30 ರೊಳಗಾಗಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಉಳಿದರ್ಧ ಭಾಗವನ್ನು ಅಕ್ಟೋಬರ್ 31 ರೊಳಗಾಗಿ ಪೂರ್ಣಗೊಳಿಸಲಾಗುವುದೆಂದು ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ.ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

Related
