KSRTC ಶಿರಾ ಬಸ್ ನಿಲ್ದಾಣದ ಶೌಚಕ್ಕೆ ಹೋಗುವ ಮಹಿಳೆಯರಿಂದ 10 ರೂ. ವಸೂಲಿ- ಹಗಲು ದರೋಡೆಗೆ ಇಳಿದ ಗುತ್ತಿಗೆದಾರ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಶಿರಾ ಘಟಕ ವ್ಯಾಪ್ತಿಗೆ ಬರುವ ಶಿರಾ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರಿಗೆ ತಲಾ 10 ರೂ. ವಸೂಲಿ ಮಾಡುವ ಮೂಲಕ ಪ್ರಯಾಣಿಕರ ಹಗಲು ದರೋಡೆಗೆ ಇಳಿದಿದ್ದಾರೆ ಶೌಚಾಲಯದ ಗುತ್ತಿಗೆ ಪಡೆದವರು.

ಈ ಸಂಬಂಧ ಕೆಎಸ್ಆರ್ಟಿಸಿ ಶಿರಾ ಘಟಕ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಶಿರಾ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯರಿಗೆ ನಿಯಮಗಳ ಅನ್ವಯ ಮೂತ್ರ ವಿಸರ್ಜನೆಗೆ ಉಚಿತ ವ್ಯವಸ್ಥೆ ಮಾಡಿಕೊಡಬೇಕು. ಮಲ ವಿಸರ್ಜನೆಗೆ ಮಾತ್ರ ಹಣ ಪಡೆಯುವಂತೆ ಕೇಂದ್ರ ಕಚೇರಿಯ ಸುತ್ತೋಲೆ ಇದ್ದು ಅದನ್ನು ಅನುಸರಿಸದೆ ಬೇಕಾಬಿಟ್ಟಿ ಮನಸ್ಸು ಇಚ್ಛೆ ಹತ್ತು ರೂಪಾಯಿ ಪಡೆಯುತ್ತಿದ್ದಾರೆ ಎಂದು ವಸಂತನಗರ ನಿವಾಸಿ ಲೋಕೇಶ್ ಎಂಬುವರು ಆರೋಪ ಮಾಡಿದ್ದಾರೆ.
ಇನ್ನು ಈಶಾನ್ಯ ವಾಯವ್ಯದಿಂದ 8 ರಿಂದ 10 ಗಂಟೆ ಪ್ರಯಾಣಿಸಿ ಉಪಾಹಾರಕ್ಕಾಗಿ ಸಿರಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುತ್ತಾರೆ. ಪ್ರತಿ ಬಸ್‌ನಿಂದ ಕನಿಷ್ಠ 10 ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ತೆರಳುತ್ತಿದ್ದು ಅವರಿಂದ ಹತ್ತು ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಅಂದರೆ ಪ್ರತಿ ದಿನವೂ 50 ರಿಂದ 60 ವಾಹನಗಳು ಇಲ್ಲಿ ಉಪಾಹಾರಕ್ಕೆ ನಿಲ್ಲಿಸಲಾಗುತ್ತದೆ. ಅದು ಅಲ್ಲದೆ ನಿತ್ಯ ಬಸ್ ನಿಲ್ದಾಣದಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರು ಅನಿವಾರ್ಯವಾಗಿ ಶೌಚಾಲಯ ಉಪಯೋಗಿಸಬೇಕಾಗಿರುವುದರಿಂದ ಅದನ್ನೇ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡುವ ದಂದೆ ಮಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ಸಂಚಾರಿ ನಿಯಂತ್ರಕರ ಬಳಿ ಮೌಖಿಕವಾಗಿ ದೂರು ನೀಡಿದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿತ್ತಿಲ್ಲ. ಪುರುಷ ಶೌಚಾಲಯದಲ್ಲಿ ಉಚಿತವಿದ್ದು ಮಹಿಳಾ ಶೌಚಾಲಯದಲ್ಲಿ ಮೂತ್ರಕ್ಕೆ 2 ರೂ ಪಡೆಯಲು ಅವಕಾಶವಿದೆ. ಆದರೂ ಕೂಡ ಸಂಚಾರಿ ನಿಯಂತ್ರಕರ ಹೊಂದಾಣಿಕೆಯಿಂದ ಈ ರೀತಿ ಶೌಚಾಲಯದ ಗುತ್ತಿಗೆದಾರರು ದಂದೆಗೆ ಇಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ತಾವು ಈ ವಿಚಾರವನ್ನು ಪರಿಶೀಲಿಸಿ ಶೌಚಾಲಯದ ಗುತ್ತಿಗೆದಾರರಿಗೆ ಸೂಕ್ತ ರೀತಿಯಾಗಿ ಸೂಚನೆ ನೀಡಿ ಮಹಿಳೆಯರು ಮೂತ್ರ ವಿಸರ್ಜನೆಗೆ ಉಚಿತವಾಗಿಯೂ ಹಾಗೂ ಮಲ ವಿಸರ್ಜನೆಗೆ 5 ರೂ. ತೆಗೆದುಕೊಳ್ಳುವುದಕ್ಕೆ ತಾಕೀತು ಮಾಡಬೇಕು ಎಂದು ಲೋಕೇಶ್ ಆಗ್ರಹಿಸಿದ್ದಾರೆ.
Related









