ಬೆಂಗಳೂರು ಗ್ರಾಮಾಂತರ: ಸಹಕಾರ ಸಂಘಗಳು ರೈತರ ಜೀವನಾಡಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ, ಬೆಂಗಳೂರು ಸಹಕಾರ ಒಕ್ಕೂಟ, ದೇವನಹಳ್ಳಿ ತಾಲೂಕು ಸಹಕಾರ ಸಂಘ ವತಿಯಿಂದ ದೇವನಹಳ್ಳಿ ಟೌನ್‌ನ ನಗರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಕಾಲಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಿಗೆ ನಿಂತಿರುವುದು ಸಹಕಾರ ಸಂಘಗಳು, ಸಹಕಾರ ಸಂಘಗಳಿಂದ ರೈತರ ಅಭಿವೃದ್ಧಿ ಸಾಧ್ಯ, ಪಹಣಿ ಇದ್ದರೆ ಸಾಕು 3 ಲಕ್ಷ ರೂ.ಗಳ ವರೆಗೆ ಸಂಘಗಳಲ್ಲಿ ಸಾಲ ಪಡೆಯಬಹುದು ಎಂದರು.
ಸಹಕಾರ ಸಂಸ್ಥೆಗಳು ಉಳಿಯಬೇಕು ಬೆಳೆಯಬೇಕು ಇದರಿಂದ ರೈತರ ಬದುಕು ಸುಧಾರಣೆಗೊಳ್ಳುತ್ತವೆ. ಜಿಲ್ಲೆಯ ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಪಿ.ಮುನಿರಾಜು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಜಗನ್ನಾಥ, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಮುನಿರಾಮು, ಉಪಾಧ್ಯಕ್ಷ ಕಾರಹಳ್ಳಿ ಜಯರಾಂ, ನಿರ್ದೇಶಕ ವಿ.ಮುನಿರಾಜು, ಸಹಕಾರ ಇಲಾಖೆಯ ಉಪನಿಬಂಧಕರಾದ ಚಂದ್ರಶೇಖರ, ಸಹಕಾರ ಸಂಘಗಳು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
Related










