ಗ್ರಾಮೀಣ ಪ್ರದೇಶದ ಬಡವರು ಕುಶಲಕರ್ಮಿಗಳು ಹಾಗೂ ಅರ್ಹ ಇತರೆ ಆರ್ಥಿಕ ದುರ್ಬಲ ವರ್ಗದವರು ಗುಡಿ ಕೈಗಾರಿಕೆಯನ್ನೋ, ಕೃಷಿಯನ್ನೊ ಅಥವಾ ಇನ್ನಿತರೆ ಸಣ್ಣ ವ್ಯವಹಾರಗಳನ್ನೋ ಪರಸ್ಪರ ಸಹಾಯದಿಂದ ಕೈಗೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರಾಗುವ ಸದುದ್ದೇಶಕ್ಕಾಗಿ ಕನಿಷ್ಠ ನಿಗದಿತ ಸಂಖ್ಯೆಯ ಸದಸ್ಯರು ಸಹಕಾರ ಸಂಘಗಳನ್ನು ಸ್ಥಾಪಿಸಿಕೊಳ್ಳಲು 1904 ರ ಬ್ರಿಟಿಷ್ ಸರ್ಕಾರವು ಕೆಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿತು.
ಇದು ಮುಂದುವರಿದು ಹಲವಾರು ತಿದ್ದುಪಡಿಗಳೊಂದಿಗೆ ಇವತ್ತೂ ಜಾರಿಯಲ್ಲಿದೆ. ಮೇಲಿನ ಸದುದ್ದೇಶಕ್ಕಾಗಿ ರಚಿಸಿಕೊಳ್ಳಲಾಗುವ ಇಂಥ ಸಹಕಾರ ಸಂಘಗಳಿಗೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಕಡಿಮೆ ಬಡ್ಡಿ ದರದಲ್ಲಿ ಸಾಲದ ರೀತಿಯಲ್ಲಿ ಕೆಲವು ಆರ್ಥಿಕ ಸೌಲಭ್ಯ/ ಅನುದಾನಗಳನ್ನು ಹಾಗೂ ರಿಯಾಯಿತಿ ದರದಲ್ಲಿ ದುಡಿಮೆಗೆ ಅವಶ್ಯವಿರುವ ಕೆಲವು ಸಾಮಗ್ರಿಗಳನ್ನು ಒದಗಿಸುತ್ತವೆ. ಇದು ಸಹಕಾರ ಕ್ಷೇತ್ರದ ಮೂಲ ಚಿತ್ರಣ ಎನ್ನಬಹುದು.
ಈಗ ಮೂಲ ವಿಷಯಕ್ಕೆ ಬರೋಣ. ಸಹಕಾರ ಮತ್ತು ಸಹಕಾರಿ ಕಾಯ್ದೆ ಅಡಿಯಲ್ಲಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಇತರೆ ಸಹಕಾರಿ ಸಂಘಗಳು / ಬ್ಯಾಂಕ್‌ಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು (KMF & 16 ಮಿಲ್ಕ್ ಯುನಿಯನ್ಸ್) ನೋಂದಣಿಯಾಗಿರುತ್ತವೆ.
ಇವು ತಮ್ಮ ಆಡಳಿತಾತ್ಮಕ ಕೆಲಸ ಕಾರ್ಯಗಳಿಗಾಗಿ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ವಿವಿಧ ಅಧಿಕಾರಿಗಳ ಹುದ್ದೆಗಳಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಇವುಗಳ ಅದ್ಯಕ್ಷರು ನೇಮಕಾತಿಯ ಅಂತಿಮ ತೀರ್ಮಾನಕರು ಎಂದೇ ಹೇಳಬಹುದು.
ಈಗ ಮುಖ್ಯ ವಿಷಯಕ್ಕೆ ಬರೋಣ. ಎಲ್ಲ ಸಹಕಾರ ಸಂಘಗಳು, ಒಕ್ಕೂಟಗಳು, ಬ್ಯಾಂಕ್ ಗಳು ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಬಹುತೇಕ 200 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸುತ್ತವೆ. ಇಲ್ಲಿ ಗಮನಿಸುವ ಮುಖ್ಯ ಅಂಶವೆಂದರೆ ಅಧ್ಯಕ್ಷರು ಬಯಸುವ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗುವಂತೆ ದೋಷ ಪೂರಿತವಾದ Key Answers, Final Key Answers ಗಳನ್ನು ಪ್ರಕಟಿಸಲಾಗುತ್ತದೆ. ಪ್ರಕಟಿತ ದೋಷ ಪೂರಿತವಾದ Final Key Answer ಗಳಿಗೂ ತೀರಾ ಆಕ್ಷೇಪಣೆ ಸಲ್ಲಿಸಿದಾಗ ಮಾತ್ರ Revised Final Key Answer ಅನ್ನು ಪ್ರಕಟಿಸಲಾಗುತ್ತೆ.
ಇಲ್ಲದಿದ್ದಲ್ಲಿ ಪ್ರತಿಭೆಗೆ ಸಹಕಾರ ಕ್ಷೇತ್ರದಲ್ಲಿ ಬೆಲೆ ಇಲ್ಲ ಎನ್ನುವುದು ಎಲ್ಲ ಪರೀಕ್ಷಾ ಅಭ್ಯರ್ಥಿಗಳಿಗೂ ತಿಳಿಯದ ವಿಷಯವೇನಲ್ಲ. ಇದು ಮುಂದುವರಿದು 200 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು 85 ಅಂಕಗಳಿಗೆ ಇಳಿಸಿ ಲೆಕ್ಕಾಚಾರ ಮಾಡಲಾಗುತ್ತೆ. ಈ ಲೆಕ್ಕಾಚಾರವೇ ಅವೈಜ್ಞಾನಿಕವಾಗಿದೆ. ಈ ಲೆಕ್ಕಾಚಾರದಲ್ಲೇ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಲಂಚದ ಹಣವನ್ನು ಪಡೆಯುವ ಸರಳವಾದ ದುರ್ಮಾರ್ಗವನ್ನು ಬಹಳ ಚಾಕಚಕ್ಯತೆಯಿಂದ ಸೃಷ್ಟಿಸಿಕೊಳ್ಳಲಾಗಿದೆ.
ಮೆರಿಟ್ ಅಧಾರದ ಮೇಲೆ ಪ್ರತಿ ಹುದ್ದೆಗೂ 1:5 ರಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತೆ. ಅಚ್ಚರಿ ಏನೆಂದರೆ 1:100 ಅನ್ವಯಿಸಿ ಆಯಾ ಹುದ್ದೆಯ ಮೂಲ ವೇತನದ 100 ಪಟ್ಟು ಲಂಚದ ಹಣ ಕೊಟ್ಟವರ ಹೆಸರು ಮಾತ್ರ ನೇಮಕಾತಿಯ ಅಂತಿಮ ಪಟ್ಟಿಯಲ್ಲಿ ಇರುವುದು ಸಹಕಾರ ಕ್ಷೇತ್ರದ ಬೈಲಾದಲ್ಲಿ ಉಲ್ಲೇಖಗೊಳ್ಳದ ನಿಯಮ ಅಂತ ಬಹುತೇಕ ಅಭ್ಯರ್ಥಿಗಳಿಗೆ ತಿಳಿದ ವಿಷಯವೇ ಆಗಿದೆ. ಯಾಕೆಂದರೆ ಪ್ರತಿ ಹುದ್ದೆಗೂ ಕಡ್ಡಾಯ ಸಂದರ್ಶನ ಇದ್ದು, ಇದಕ್ಕೆ 15 ಅಂಕಗಳು ಇರುತ್ತವೆ.
ಇನ್ನೂ ತಮಾಷೆಯ ವಿಷಯ ಏನೆಂದರೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕ, ಸಂದರ್ಶನಕ್ಕೆ ಅರ್ಹಗೊಂಡ ಅಭ್ಯರ್ಥಿಗಳ ಪಟ್ಟಿ, ಸಂದರ್ಶನದಲ್ಲಿ ಪಡೆದ ಅಂಕಗಳ ಮಾಹಿತಿ ಮತ್ತು ಅಂತಿಮವಾಗಿ ನೇಮಕಗೊಂಡ ಅಭ್ಯರ್ಥಿಗಳ ಯಾವುದೇ ಮಾಹಿತಿಯು ಪರೀಕ್ಷೆ ಬರೆದ ಯಾವೊಬ್ಬ ಅಭ್ಯರ್ಥಿಗಾಗಲಿ ಅಥವಾ ಸಾರ್ವಜನಿಕರಿಗೆ ತಿಳಿಯುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಮಾಹಿತಿ ಕೇಳಿದರೂ ಯಾವುದೋ ಪ್ರಕರಣವನ್ನು ಉಲ್ಲೇಖಿಸಿ ಮಾಹಿತಿ ನಿರಾಕರಿಸುತ್ತಾರೆ.
ಸಹಕಾರ ಕ್ಷೇತ್ರದ ಒಟ್ಟಾರೆ ಈ ರೀತಿಯಾದ ಅಪಾರದರ್ಶಕತೆ ನೀತಿ ನಿಯಮ, ಬ್ರಹ್ಮಾಂಡ ಭ್ರಷ್ಟಚಾರ ಕಂಡು ತಿಳಿದೇ ಪ್ರತಿಭಾನ್ವಿತ ಅಭ್ಯರ್ಥಿಗಳು ಈ ಕ್ಷೇತ್ರಕ್ಕೆ ಕಾಲಿಡುತ್ತಿಲ್ಲ. ಪಾರದರ್ಶಕ ಕಾಪಾಡುವ ನಿಟ್ಟಿನಲ್ಲಿ KCS ACT ನ ನೇಮಕಾತಿ ಸಂಬಂಧಿತ ನಿಯಮಗಳನ್ನು ಶಾಸಕಾಂಗದವರು ಬದಲಾಯಿಸಲು ಮನಸ್ಸು ಮಾಡುವುದಿಲ್ಲ ಏಕೆಂದರೆ ಅವರಿಗೂ ಇಂಥ ನೇಮಕಾತಿಗಳಿಂದ ಫಂಡಿಂಗ್ ಆಗುತ್ತಿರುತ್ತೆ.
ಆದ್ದರಿಂದ ಸಹಕಾರ ಕ್ಷೇತ್ರದ ನೇಮಕಾತಿ ಕುರಿತಾಗಿ ನ್ಯಾಯಾಂಗವೇ ಸ್ವ ಇಚ್ಚೆಯಿಂದ ಇವೆಲ್ಲಾ ಅರಿತುಕೊಂಡು ಸೂಕ್ತ ಆದೇಶವನ್ನು ಹೊರಡಿಸಿ ಲಂಚ ಕೊಡಲು ಸಾಧ್ಯವಾಗದ / ಇಚ್ಚೆಯಿಲ್ಲದ ನಮ್ಮಂಥ ಮೆರಿಟ್ ಅಭ್ಯರ್ಥಿಗಳಿಗೆ ಶೀಘ್ರವಾಗಿ ನ್ಯಾಯ ಒದಗಿಸಬೇಕೆಂದು ನನ್ನಂಥ ನಿರುದ್ಯೋಗಿ ಅಭ್ಯರ್ಥಿಯ ಅಹವಾಲು.
ಇದು ಒಂದು ಕಡೆಯಾದರೆ ಪಾರದರ್ಶಕ ಕಾಪಾಡಿಕೊಳ್ಳಲು ಸಹಕಾರ ಸಂಘಗಳಿಗೆ, ಒಕ್ಕೂಟಗಳಿಗೆ, ಸಹಕಾರಿ ಬ್ಯಾಂಕ್ ಗಳಿಗೆ ಸೂಕ್ತ ನಿರ್ದೇಶನ ನೀಡಿದಲ್ಲಿ ನೇಮಕಾತಿಯಲ್ಲಿ ಯಾವುದೇ ಲಾಭವಿಲ್ಲವೆಂದು ತಿಳಿದು ಅವುಗಳ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಈಗಿನ ರೀತಿಯಲ್ಲಿ ಧಾರಳವಾಗಿ ನಿಯಮಿತವಾಗಿ ನೇಮಕಾತಿ ಮಾಡುಕೊಳ್ಳುವವೇ ಎಂಬ ದುಗುಡ..!
l ಶಿವಕುಮಾರ್ ಶಿಣ್ಣುರ, ಕಲಬುರಗಿ