CRIMENEWSನಮ್ಮರಾಜ್ಯ

ಪತಿ ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೊರ್ಟ್‌

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಪತಿಯನ್ನು ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬನಿಗೆ ಏಳುವರ್ಷ ಜೈಲು ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರಿದ್ದ ಪೀಠ ಈ ತೀರ್ಪು ನೀಡಿದ್ದು, ಅಂತರಗಂಗೆಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ಲಕ್ಷ್ಮೀ ಹಾಗೂ ಆಕೆಯ ಪ್ರಿಯಕರ ಕೃಷ್ಣಮೂರ್ತಿ ಮತ್ತು ಶಿವರಾಜ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಸೊರಬದ ಇಮ್ತಿಯಾಜ್ ಎಂಬ ಶಿಕ್ಷಕ ಗುಲ್ಬರ್ಗದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ, ಲಕ್ಷ್ಮೀಯನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇವರಿಗೆ ಒಂದು ಗಂಡು ಮಗು ಸಹ ಇತ್ತು. ನಂತರ ಇಮ್ತಿಯಾಜ್ ಸೊರಬದ ತೆಲಗುಂದ ಗ್ರಾಮಕ್ಕೆ ವರ್ಗಾವಣೆಯಾಗಿದ್ದರು.

ಭದ್ರಾವತಿಯ ಅಂತರಗಂಗೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಲಕ್ಷ್ಮೀ ಭದ್ರಾವತಿಯ ಜನ್ನಾಪುರದ ಎನ್‌ಟಿಬಿ ಕಚೇರಿ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆಕೆಯ ಪತಿ ಇಮ್ತಿಯಾಜ್ ಆಗಾಗ ಸೊರಬದಿಂದ ಅಲ್ಲಿಗೆ ಬಂದುಹೋಗುತ್ತಿದ್ದರು.

ಲಕ್ಷ್ಮೀ ಮನೆಯ ಪಕ್ಕದಲ್ಲಿಯೆ ಆಕೆಯ ಬಾಲ್ಯದ ಗೆಳೆಯ ಕೃಷ್ಣಮೂರ್ತಿ ಎಂಬಾತ ಮನೆಮಾಡಿಕೊಂಡಿದ್ದ. ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ನಡುವೆ ಹೆಚ್ಚಿನ ಒಡನಾಟ ಕಂಡುಬಂದ ಕಾರಣ ಇಮ್ತಿಯಾಜ್ ತನ್ನ ಪತ್ನಿಗೆ ಇದು ಸರಿಯಲ್ಲ ಎಂದು ಬುದ್ಧಿಹೇಳುತ್ತಿದ್ದರು. ಈ ವಿಷಯ ಇಮ್ತಿಯಾಜ್ ಮನೆಯವರಿಗೂ ಸಹ ತಿಳಿದು ಆವರೂ ಸಹ ಲಕ್ಷ್ಮೀಗೆ ಬುದ್ದಿವಾದ ಹೇಳಿದ್ದರು.

2016ರಲ್ಲಿ ಇಮ್ತಿಯಾಜ್ ಪತ್ನಿ ಲಕ್ಷ್ಮೀಯನ್ನು ರಂಜಾನ್ ಹಬ್ಬಕ್ಕೆ ಕರೆತರುವುದಾಗಿ ಜನ್ನಾಪುರಕ್ಕೆ ಬಂದಿದ್ದರು. ಆಗ ಆಕೆ ಕೃಷ್ಣಮೂರ್ತಿಯೊಂದಿಗೆ ಸಲುಗೆಯಿಂದಿರುವುದು ನೋಡಿ ಆಕೆಯೊಂದಿಗೆ ಜಗಳವಾಡಿದ್ದರು. ಹೀಗಾಗಿ 2016 ಜುಲೈ 7 ರಂದು ರಾತ್ರಿ 7:30 ರ ಸಮಯದಲ್ಲಿ ಈ ಕುರಿತಂತೆ ಲಕ್ಷ್ಮೀಗೂ ಇಮ್ತಿಯಾಜ್‌ಗೂ ಜಗಳವಾಗಿದೆ.

ಆಗ ಲಕ್ಷ್ಮೀ ತನ್ನ ಸ್ನೇಹಿತ ಕೃಷ್ಣಮೂರ್ತಿ ಜೊತೆ ಸೇರಿ ಇಮ್ತಿಯಾಜ್‌ ಅವರನ್ನು ರಾಡಿನಿಂದ ಹೊಡೆದು ಕೊಲೆ ಮಾಡಿದ್ದಳು. ನಂತರ ಮತ್ತೋರ್ವ ಶಿವರಾಜ್ ಎಂಬಾತನ ನೆರವನ್ನು ಪಡೆದುಕೊಂಡು ಮೂವರೂ ಸೇರಿ ಇಮ್ತಿಯಾಜ್ ಮೃತದೇಹವನ್ನು ಭದ್ರಾ ನದಿಗೆ ಎಸೆದಿದ್ದರು. ಕೊಲೆಯಾದ ಮಾರನೆ ದಿನ ಲಕ್ಷ್ಮೀ, ಇಮ್ತಿಯಾಜ್ ಸಹೋದರನಿಗೆ ಫೋನ್ ಮಾಡಿ ಕೂಡಲೆ ಬರುವಂತೆ ಹೇಳಿದ್ದಳು.

ಇಮ್ತಿಯಾಜ್ ಸಹೋದರ ಭದ್ರಾವತಿಯ ಲಕ್ಷ್ಮೀ ಮನೆಗೆ ಬಂದಾಗ ಆಕೆ ಅಳುತ್ತಾ ರಾತ್ರಿ ನನಗೂ ನಿಮ್ಮಣ್ಣ ಇಮ್ತಿಯಾಜ್‌ಗೂ ಜಗಳವಾಯಿತು. ಆ ಸಿಟ್ಟಿನ ಬರದಲ್ಲಿ ನಾನು ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದೆ. ಅದರಿಂದ ಅವನು ಸತ್ತುಹೋದ. ಆಗ ನಾನು ಪಕ್ಕದ ಮನೆಯ ಕೃಷ್ಣಮೂರ್ತಿ ಹಾಗೂ ಶಿವರಾಜ್ ಅವರ ಬಳಿ ಸಹಾಯ ಕೇಳಿ, ಅವರ ಸಹಾಯದಿಂದ ಇಮ್ತಿಯಾಜ್ ದೇಹವನ್ನು ಭದ್ರಾ ನಾಲೆಗೆ ಹಾಕಿದೆ. ಈಗ ನೀವೇ ನಮ್ಮನ್ನು ಕಾಪಾಡಬೇಕು ಎಂದು ಕೇಳಿಕೊಂಡಿದ್ದಳು.

ಇಮ್ತಿಯಾಜ್ ಸಹೋದರ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಲಕ್ಷ್ಮೀ, ಕೃಷ್ಣಮೂರ್ತಿ, ಶಿವರಾಜ್ ವಿರುದ್ಧ ದೂರು ಸಲ್ಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಕ್ಷ್ಮೀ, ಕೃಷ್ಣಮೂರ್ತಿ ಮತ್ತು ಶಿವರಾಜ್ ಈ ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮುಖ ಅಪರಾಧಿ ಲಕ್ಷ್ಮೀ ಹಾಗೂ ಕೃಷ್ಣಮೂರ್ತಿಗೆ ಕೊಲೆಗಾಗಿ ಮರಣದಂಡನೆ ಹಾಗೂ ಶಿವರಾಜ್‌ಗೆ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪಕ್ಕೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮರಣ ದಂಡನೆ ಶಿಕ್ಷೆ ಜತೆಗೆ ಮತ್ತು 13 ಲಕ್ಷ ದಂಡವನ್ನು ವಿಧಿಸಿದ್ದು ಇದರಲ್ಲಿ 10 ಲಕ್ಷ ಹಣವನ್ನು ಮೃತನ ತಾಯಿಗೆ ಪರಿಹಾರವಾಗಿ ನೀಡಬೇಕು. ಉಳಿದ 3 ಲಕ್ಷ ಹಣವನ್ನ ದಂಡವಾಗಿ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

Megha
the authorMegha

Leave a Reply

error: Content is protected !!