ಎಲ್ಲ ಕಚೇರಿಗಳು, ನಿಗಮಗಳಲ್ಲೂ ಲೋಕಾ ಯುಕ್ತರ ಸಹಾಯವಾಣಿ ಸಂಖ್ಯೆ ಒಳಗೊಂಡ ಪ್ರದರ್ಶನ ಫಲಕ ಅಳವಡಿಸಲು ಸಿಎಸ್ ಡಾ. ಶಾಲಿನಿ ರಜನೀಶ್ ಆದೇಶ

ಬೆಂಗಳೂರು: ಭ್ರಷ್ಟಾಚಾರ ಲಂಚಗುಳಿತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಯನ್ನೊಳಗೊಂಡ ಪ್ರದರ್ಶನ ಫಲಕಗಳನ್ನು ಅಳವಡಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಕಳೆದ ಮಾ.30ರಂದು ಆದೇಶ ಹೊರಡಿಸಿದರುವ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ರಚನೆ ಕಾರ್ಯವ್ಯಾಪ್ತಿ, ವಿಳಾಸಗಳು, ಕಾರ್ಯನಿರ್ವಹಣಾ ರೀತಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲ ಇಲಾಖೆ/ ಕಚೇರಿ/ ಸಂಸ್ಥೆ/ ಪಾಲಿಕೆ/ ನಗರಸಭೆ/ ನಿಗಮ ಮಂಡಳಿಗಳ ಪ್ರವೇಶ ದ್ವಾರ ಹಾಗೂ ಈ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಮುಕ್ತವಾಗಿ ಕಾಣುವಂತಹ ತೆರೆದ ಸ್ಥಳಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಗಳಾದ 080-22375014 ಮತ್ತು 080-22011298 Toll Free from Mobile Ph-18004255320 ಅಳವಡಿಸಬೇಕು ಎಂದು ಆದೇಶ ಮಾಡಿದ್ದಾರೆ.
ಇನ್ನು ಇದಿಷ್ಟೇ ಅಲ್ಲದೆ ಸಿ.ಯು.ಜಿ. ಸಿಮ್‌ಗಳ ಸಂಖ್ಯೆ ಮತ್ತು ಆಯಾ ಜಿಲ್ಲೆಯಲ್ಲಿರುವ ಲೋಕಾಯುಕ್ತ ಜಿಲ್ಲಾ ಪೊಲೀಸ್ ಠಾಣೆಯ ಸ್ಥಿರ ದೂರವಾಣಿ ಸಂಖ್ಯೆ ಮತ್ತು ಪೊಲೀಸ್ ಅಧಿಕಾರಿಗಳ ಸಿ.ಯು.ಜಿ. ಸಿಮ್‌ಗಳ ಮಾಹಿತಿಯನ್ನೊಳಗೊಂಡ ಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಗಿತ್ತು.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮೊದಲನೇ ವರದಿಯ ಚಾಪ್ಟರ್-2ರಲ್ಲಿನ ಕ್ರಮ ಸಂಖ್ಯೆ:112ರಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬಹುದಾದ ಫಲಕಗಳ ಕುರಿತು ಶಿಫಾರಸು ಮಾಡಿದೆ. ಅದರಂತೆ, ಎಲ್ಲ ಸರ್ಕಾರಿ ಇಲಾಖೆಗಳು/ ಸಂಸ್ಥೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಕೆಳಕಂಡ ನಮೂನೆಯಂತೆ ಪ್ರದರ್ಶನ ಫಲಕದಲ್ಲಿ ಪ್ರದರ್ಶಿಸತಕ್ಕದ್ದು.
ಫಲಕದಲ್ಲಿ ಪ್ರದರ್ಶಿಸಬೇಕಿರುವುದು ಏನು?: “ಲಂಚವನ್ನು ನೀಡಬೇಡಿ. ಯಾರಾದರೂ ಕಚೇರಿಯಲ್ಲಿ ಲಂಚವನ್ನು ಕೇಳಿದರೆ ಅಥವಾ ಈ ಕಚೇರಿಯಲ್ಲಿ ಭ್ರಷ್ಟಾಚಾರವಿರುವ ಬಗ್ಗೆ ತಮಗೆ ಮಾಹಿತಿಯಿದ್ದರೆ ಅಥವಾ ತಾವು ಈ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದರೆ, ಈ ಇಲಾಖಾ ಮುಖ್ಯಸ್ಥರಲ್ಲಿ ಅಥವಾ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳಲ್ಲಿಯೂ ದೂರನ್ನು ಸಲ್ಲಿಸಬಹುದು.”
“DO NOT PAY BRIBES. IF ANYBODY OF THIS OFFICE ASKS FOR BRIBE OR IF YOU HAVE ANY INFORMATION ON CORRUPTION IN THIS OFFICE OR IF YOU ARE A VICTIM OF CORRUPTION IN THIS OFFICE, YOU CAN COMPLAIN TO THE HEAD OF THIS DEPARTMENT, OR OFFICERS OF KARNATAKA LOKAYUKTA.”
ಈ ಮೇಲ್ಕಂಡ ಸಂದೇಶವನ್ನು ಪ್ರದರ್ಶಿಸುವುದಲ್ಲದೇ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಚೇರಿಯ ಅಧಿಕಾರಿಗಳ ಪದನಾಮ, ಪೂರ್ಣ ವಿಳಾಸ, ಸ್ಥಿರ ದೂರವಾಣಿ ಸಂಖ್ಯೆ, ಸಹಾಯವಾಣಿ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಪ್ರದರ್ಶಿಸತಕ್ಕದ್ದು.
ಈ ಸಂಬಂಧದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಚೇರಿಯ ಹಾಗೂ ಜಿಲ್ಲಾ ಲೋಕಾಯುಕ್ತ ಕಚೇರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಪಟ್ಟಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದೆ.
ಎಲ್ಲ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಸರ್ಕಾರದ ಕಾರ್ಯದರ್ಶಿಗಳು ಮೇಲಿನ ಸೂಚನೆಯಂತೆ ಕ್ರಮವಹಿಸಲು ಹಾಗೂ ಅವರ ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲ ಇಲಾಖಾ ಮುಖ್ಯಸ್ಥರು/ ನಿಗಮ/ ಮಂಡಳಿ/ ಸ್ನಾಯತ್ತ ಸಂಸ್ಥೆಗಳಿಗೆ ಈ ಸಂಬಂಧ ಸೂಚನೆಗಳನ್ನು ನೀಡುವಂತೆಯೂ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ ಮಾಡಿದ್ದಾರೆ.
ಲಂಚಾವತಾರಕ್ಕೆ ಸಾರಿಗೆ ನಿಗಮದ ಬಹುತೇಕ ಅಧಿಕಾರಿಗಳು ಹೆಸರುವಾಸಿಯಾಗಿದ್ದು ಬಹುತೇಕ ಎಲ್ಲ ಘಟಕಗಳಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗಳಲ್ಲಿ ಅಷ್ಟೇ ಏಕೆ ಶಾಂತಿ ನಗರದಲ್ಲಿರುವ ಸಾರಿಗೆಯ ಕೇಂದ್ರ ಕಚೇರಿಯಲ್ಲೂ ಲಂಚ ಭ್ರಷ್ಟಾಚಾರ ಎಂಬುವುದು ಎಲ್ಲೆ ಮೀರಿದೆ. ಇದಕ್ಕೆ ಕಡಿವಾಣ ಹಾಬೇಕು ಎಂದರೆ ಇಂಥ ಆದೇಶಗಳು ಪಾಲನೆಯಾಗಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಅಲ್ಲದೆ ಮೊದಲು ನಮ್ಮ ನಿಗಮಗಳಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಚೇರಿಯ ಅಧಿಕಾರಿಗಳ ಪದನಾಮ, ಪೂರ್ಣ ವಿಳಾಸ, ಸ್ಥಿರ ದೂರವಾಣಿ ಸಂಖ್ಯೆ, ಸಹಾಯವಾಣಿ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಪ್ರದರ್ಶಿಸಬೇಕು. ಇದು ಒಳ್ಳೆಯ ಕೆಲಸ ಎಂದು ಡಾ. ಶಾಲಿನಿ ರಜನೀಶ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
Related









