ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ವಾಯುವ್ಯ ಹಾಗೂ ಕೇಂದ್ರೀಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲನಾ ಸಿಬ್ಬಂದಿಗಳನ್ನು ಹೊಸದಾಗಿ ಕೌನ್ಸೆಲಿಂಗ್ ಮಾಡಿ, ಡ್ಯೂಟಿ ರೋಟಾ ಪದ್ಧತಿಯನ್ನು ಜಾರಿಗೊಳಿಸುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು ಇಂದು ಆದೇಶ ಹೊರಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳನ್ನು ಮಾರ್ಗಗಳಿಗೆ ನಿಯೋಜಿಸುವಾಗ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಸಾರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟಲು ಚಾಲನಾ ಸಿಬ್ಬಂದಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹಾಗೂ ನಿಷ್ಪಕ್ಷಪಾತವಾದ ಮಾರ್ಗ ನಿಯೋಜನೆಗಾಗಿ ಡ್ಯೂಟಿ ರೋಟಾ ಪದ್ಧತಿಯನ್ನು (Duty Rota System) ಜಾರಿಗೆ ತರಲಾಗಿದೆ.
ಅದರಂತೆ ಈ ಆದೇಶದನ್ವಯ ಮಾರ್ಗಸೂಚಿಗಳನ್ನು ಅನುಸರಿಸಿ, 15-08-2025 ರಿಂದ ಜಾರಿಗೆ ಬರುವಂತೆ ಡ್ಯೂಟಿ ರೋಟಾ ಪದ್ಧತಿಯನ್ನು ನವೀಕರಿಸಿ ಪುನರ್ ನಿಗದಿಗೊಳಿಸಲು ಕೆಳಕಂಡಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.
ಅದರಲ್ಲಿ 28-07-2025 ರೊಳಗೆ ಜೇಷ್ಠತಾ ಪಟ್ಟಿಯನ್ನು ಪ್ರದರ್ಶಿಸುವುದು. 31-07-2025 ರೊಳಗೆ ಡ್ಯೂಟಿ ರೋಟಾ ಬ್ಲಾಕ್‌ಗಳನ್ನು ಪ್ರದರ್ಶಿಸುವುದು. ಜೇಷ್ಠತಾ ಪಟ್ಟಿಯಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ 01-08-2025 ರೊಳಗೆ ಪಡೆಯುವುದು. 03-08-2025 ರೊಳಗೆ ಜೇಷ್ಠತಾ ಪಟ್ಟಿಯನ್ನು ಸರಿಪಡಿಸುವುದು.
ಆ ಬಳಿಕ ಅಂದರೆ 04-08-2025 ರಿಂದ 11-08-2025 ರೊಳಗೆ ಕೌನ್ಸೆಲಿಂಗ್ ಸಭೆ ನಡೆಸುವುದು. ಇದೆಲ್ಲ ಪೂರ್ಣಗೊಂಡ ಮೇಲೆ 15-08-2025 ರಿಂದ ಹೊಸ ಡ್ಯೂಟಿ ರೋಟಾ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅನುಸೂಚಿಗಳಿಗೆ ಪರಿಷ್ಕೃತ ಸೇರ್ಪಡೆ: ಈಗಾಗಲೇ ತಿಳಿಸಿರುವಂತೆ ಸಾಮಾನ್ಯ ಪಾಳಿ ಅನುಸೂಚಿಗಳಿಗೆ ಕರ್ತವ್ಯ ನಿಯೋಜನೆ ಸಂಬಂಧ ನಿರ್ವಾಹಕರಿಗೆ 24,000 ರೂ. ಹಾಗೂ ಚಾಲಕ-ಕಂ-ನಿರ್ವಾಹಕರಿಗೆ 27,000 ರೂ. ಮೂಲ ವೇತನವನ್ನು ನಿಗದಿಪಡಿಸಲಾಗಿದೆ. ಅಂದರೆ 24,000 ರೂ.ಗಳಿಗಿಂತ ಅಧಿಕ ಮೂಲವೇತನ ಹೊಂದಿದ ನಿರ್ವಾಹಕರನ್ನು ಹಾಗೂ 27,000 ರೂ.ಗಳಿಗಿಂತ ಅಧಿಕ ಮೂಲ ವೇತನ ಹೊಂದಿದ ಚಾಲಕರು, ಚಾಲಕ-ಕಂ-ನಿರ್ವಾಹಕರನ್ನು ಸಾಮಾನ್ಯ ಪಾಳಿ ಅನುಸೂಚಿಗಳ ಕರ್ತವ್ಯಕ್ಕೆ ನಿಯೋಜಿಸದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ಶನಿವಾರ ಹಾಗೂ ಭಾನುವಾರಗಳಂದು ನಿಗದಿಪಡಿಸಿದ ಯೋಜನಾ ರದ್ದತಿ ಪ್ರಯಾಣಕ್ಕೆ ಅನುಗುಣವಾಗಿ, ಅನುಸೂಚಿಗಳ ಬ್ಲಾಕ್‌ಗಳನ್ನು ತಯಾರಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ PDF ನೋಡಬಹುದು Dutyrota order
Related
