ಮೈಸೂರು: ಮೈಸೂರು ನಗರ ದಸರಾ ಸಡಗರ ಸಂಭ್ರಮದಲ್ಲಿ ತೇಲುತ್ತಿದೆ. ಈಗಾಗಲೇ ದಸರಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಆರಂಭವಾಗಿದ್ದು, ಅಧಿಕೃತ ದಸರಾ ಕಾರ್ಯಕ್ರಮಗಳಿಗೆ ಅ.15ರಂದು ಚಾಲನೆ ಸಿಗಲಿದ್ದು, ಆ ನಂತರ ರಾತ್ರಿ ಆಯಿತೆಂದರೆ ಇಡೀ ನಗರ ಕತ್ತಲನ್ನು ಹೊಡೆದೋಡಿಸಿ ಬೆಳಕಿನಲ್ಲಿ ಚಿತ್ತಾರ ಬರೆಯಲಿದೆ.
ಈಗಾಗಲೇ ಇಡೀ ನಗರ ದಸರಾ ಬೆಳಕಿನಲ್ಲಿ ಮಿಂದೇಳಲು ತಯಾರಾದಂತೆ ಗೋಚರಿಸುತ್ತಿದೆ, ನಗರಕ್ಕೆ ವಿದ್ಯುದ್ದೀಪ ಅಳವಡಿಸುವ ಕಾರ್ಯಗಳು ಭರದಿಂದ ನಡೆಯುತ್ತಿದೆ. ಅ.15ರ ವೇಳೆಗೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಮುಗಿಯಲಿದ್ದು ಅಂದು ದಸರಾಕ್ಕೆ ಚಾಲನೆ ಸಿಗುವುದರೊಂದಿಗೆ ವಿದ್ಯುದ್ದೀಪದ ಅಲಂಕಾರಕ್ಕೂ ಅಧಿಕೃತ ಚಾಲನೆ ದೊರೆಯಲಿದೆ. ಆ ನಂತರ ಸಾಂಸ್ಕೃತಿಕ ನಗರಿ ಮೈಸೂರು ಥೇಟ್ ದೇವೇಂದ್ರನ ಅಮರಾವತಿಯೇ ಧರೆಗಿಳಿದು ಬಂದಂತೆ ಗೋಚರಿಸಲಿದೆ.
ಪ್ರತಿವರ್ಷವೂ ದಸರಾ ವೇಳೆ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದು, ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಸಾಮಾನ್ಯವಾಗಿ ಹಬ್ಬಹರಿದಿನಗಳು ಬರುತ್ತಿದ್ದಂತೆಯೇ ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಇನ್ನು ದಸರಾದಲ್ಲಿ ಹೇಳಬೇಕೆ ಅದರ ಸಡಗರವೇ ಬೇರೆ.. ವರ್ಣಿಸಲು ಅಸಾಧ್ಯವಾಗಿ ಬಿಡುತ್ತದೆ.
ಈಗಾಗಲೇ ಐತಿಹಾಸಿಕ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಕಾವೇರಿ ಕಾರ್ಮೋಡ, ಬರದ ಆತಂಕದ ನಡುವೆಯೂ ಅದೆಲ್ಲವನ್ನು ಮರೆತು ನಗರದ ಜನ ದಸರಾ ಸಡಗರದಲ್ಲಿ ಮೀಯುತ್ತಿದ್ದಾರೆ. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾಸಡಗರ. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿದ್ದರೆ ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಅಹಾರ ಮೇಳ ಮಾಡಲಿದೆ.
ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿವೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಯಿಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡಲಿದೆ.
ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗಲಿದ್ದು, ನಗರದ ಅಲ್ಲಲ್ಲಿ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ.