ತುಮಕೂರು: KSRTC ಶಿರಾ ಬಸ್ ನಿಲ್ದಾಣದ ಶೌಚಕ್ಕೆ ಹೋಗುವ ಮಹಿಳೆಯರಿಂದ 10 ರೂ. ವಸೂಲಿ- ಹಗಲು ದರೋಡೆಗೆ ಇಳಿದ ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡಿದ ಡಿಸಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಶಿರಾ ಘಟಕ ವ್ಯಾಪ್ತಿಗೆ ಬರುವ ಶಿರಾ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರಿಂದ ತಲಾ 10 ರೂ. ವಸೂಲಿ ಮಾಡುವ ಮೂಲಕ ಪ್ರಯಾಣಿಕರ ಹಗಲು ದರೋಡೆಗೆ ಇಳಿದಿದ್ದಾರೆ ಶೌಚಾಲಯದ ಗುತ್ತಿಗೆ ಪಡೆದವರು ಎಂದು ವಿಜಯಪಥದಲ್ಲಿ ವರದಿ ಬಂದ ಬೆನ್ನಲ್ಲೇ ಸಂಸ್ಥೆಯ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಶೌಚಾಲಯ ಗುತ್ತಿಗೆ ಪಡೆದಿರುವ ಬೆಂಗಳೂರು ಆರ್.ಟಿ.ನಗರ ನಿವಾಸಿ ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್‌ನ ಜಿ. ವೆಂಕಪ್ಪ ಹೆಗಡೆ ಅವರಿಗೆ ಡಿಸಿ ನೋಟಿಸ್ ಜಾರಿಮಾಡಿದ್ದು ಅದರಲ್ಲಿ ವಿಭಾಗದ ವ್ಯಾಪ್ತಿಯ ಶಿರಾ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ.
ತಾವು ತುಮಕೂರು ವಿಭಾಗದ ವ್ಯಾಪ್ತಿಯ ಎಲ್ಲ ಬಸ್ ನಿಲ್ದಾಣಗಳ ಆವರಣ, ಶೌಚಾಲಯ/ ಮೂತ್ರಾಲಯ ಮತ್ತು ಸಿಬ್ಬಂದಿಗಳ ವಿಶ್ರಾಂತಿ ಗೃಹದ ಸ್ವಚ್ಛತಾ ನಿರ್ವಹಣೆಗಾಗಿ 01-11-2024 ರಿಂದ 31-10-2027ರ ವರೆಗೆ ಮೂರು ವರ್ಷಗಳ ಸ್ವಚ್ಛತಾ ಗುತ್ತಿಗೆದಾರರಾಗಿ ಆಯ್ಕೆಯಾಗಿರುತ್ತೀರಿ. ಮುಂದುವರಿದು, ಶಿರಾ ಬಸ್ ನಿಲ್ದಾಣದಲ್ಲಿ ಮೂತ್ರಾಲಯ/ ಶೌಚಾಲಯ ಬಳಕೆಗೆ ದರಗಳ ಬೋರ್ಡ್‌ನ್ನು ಅಳವಡಿಸಿದ್ದರೂ ಸಹ ಅಂಗವಿಕಲರ ಹತ್ತಿರ 10 ರೂ.ಗಳನ್ನು ಶೌಚಾಲಯ ನಿರ್ವಹಣಾ ಸಿಬ್ಬಂದಿಗಳು ಪಡೆದಿರುವ ಬಗ್ಗೆ ಘಟಕ ವ್ಯವಸ್ಥಾಪಕರು ಶಿರಾ ಘಟಕರವರು ವರದಿ ನೀಡಿದ್ದಾರೆ.
ಅಲ್ಲದೆ ಕರಾರು ಒಪ್ಪಂದದ ನಿಯಮಾವಳಿಗಳಂತೆ ಪುರುಷ ಮತ್ತು ಮಹಿಳಾ ಸಾರ್ವಜನಿಕ ಪ್ರಯಾಣಿಕರಿಗೆ ಮೂತ್ರಾಲಯ ಉಪಯೋಗಕ್ಕೆ ಉಚಿತವಾಗಿದ್ದು, ಶೌಚಾಲಯ ಬಳಕೆದಾರರಿಂದ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ 3 ರೂ. ಮತ್ತು ತಾಲೂಕು ಹಾಗೂ ಹೋಬಳಿ ಕೇಂದ್ರ ಬಸ್ ನಿಲ್ದಾಣಗಳಲ್ಲಿ 2 ರೂ .ಗಳನ್ನು ಮಾತ್ರ ಪಡೆಯುವಂತೆ ನಿಯಮವಿದೆ.
ಆದರೆ ತಮ್ಮ ಶೌಚಾಲಯ ನಿರ್ವಹಣಾ ಸಿಬ್ಬಂದಿಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಬಳಕೆದಾರರಿಂದ ವಸೂಲಿ ಮಾಡಿ, ಕರಾರು ಒಪ್ಪಂದದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಸಂಬಂದ ಪ್ರಯಾಣಿಕರು ಲಿಖಿತ ದೂರು ದಾಖಲಿಸಿರುವ ಬಗ್ಗೆ ಶಿರಾ ಘಟಕ ವ್ಯವಸ್ಥಾಪಕರು ವರದಿ ಸಲ್ಲಿಸಿಸಿದ್ದಾರೆ. ಈ ಕರಾರಿನ ನಿಯಮಾವಳಿಯಂತೆ ತಮ್ಮ ಶೌಚಾಲಯ ನಿರ್ವಹಣಾ ಸಿಬ್ಬಂದಿಗಳಿಗೆ ನಿಗದಿತ ಶುಲ್ಕವನ್ನು ಪಡೆಯುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ ಇದು ಮತ್ತೆ ಪುನರಾರ್ವತೆಯಾದಲ್ಲಿ ಕರಾರು ಒಪ್ಪಂದದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ನಿಗಮದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸೂಕ್ತ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದ ಪ್ರಯಾಣಿಕರು:
ಕೆಎಸ್ಆರ್ಟಿಸಿ ಶಿರಾ ಘಟಕ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿ ಗುತ್ತಿಗೆದಾರರ ವಿರುದ್ಧ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದರು.
ಅಲ್ಲದೆ ಶಿರಾ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯರಿಗೆ ನಿಯಮಗಳ ಅನ್ವಯ ಮೂತ್ರ ವಿಸರ್ಜನೆಗೆ ಉಚಿತ ವ್ಯವಸ್ಥೆ ಮಾಡಿಕೊಡಬೇಕು. ಮಲ ವಿಸರ್ಜನೆಗೆ ಮಾತ್ರ ಹಣ ಪಡೆಯುವಂತೆ ಕೇಂದ್ರ ಕಚೇರಿಯ ಸುತ್ತೋಲೆ ಇದ್ದು ಅದನ್ನು ಅನುಸರಿಸದೆ ಬೇಕಾಬಿಟ್ಟಿ ಮನಸ್ಸು ಇಚ್ಛೆ ಹತ್ತು ರೂಪಾಯಿ ಪಡೆಯುತ್ತಿದ್ದಾರೆ ಎಂದು ವಸಂತನಗರ ನಿವಾಸಿ ಲೋಕೇಶ್ ಎಂಬುವರು ಆರೋಪ ಮಾಡಿದ್ದರು.
ಇನ್ನು ಈಶಾನ್ಯ ವಾಯವ್ಯದಿಂದ 8 ರಿಂದ 10 ಗಂಟೆ ಪ್ರಯಾಣಿಸಿ ಉಪಾಹಾರಕ್ಕಾಗಿ ಸಿರಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುತ್ತಾರೆ. ಪ್ರತಿ ಬಸ್‌ನಿಂದ ಕನಿಷ್ಠ 10 ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ತೆರಳುತ್ತಿದ್ದು ಅವರಿಂದ ಹತ್ತು ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಅಂದರೆ ಪ್ರತಿ ದಿನವೂ 50 ರಿಂದ 60 ವಾಹನಗಳು ಇಲ್ಲಿ ಉಪಾಹಾರಕ್ಕೆ ನಿಲ್ಲಿಸಲಾಗುತ್ತದೆ. ಅದು ಅಲ್ಲದೆ ನಿತ್ಯ ಬಸ್ ನಿಲ್ದಾಣದಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರು ಅನಿವಾರ್ಯವಾಗಿ ಶೌಚಾಲಯ ಉಪಯೋಗಿಸಬೇಕಾಗಿರುವುದರಿಂದ ಅದನ್ನೇ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡುವ ದಂದೆ ಮಾಡುತ್ತಿದ್ದಾರೆ.
ಇನ್ನು ಈ ಬಗ್ಗೆ ಸಂಚಾರಿ ನಿಯಂತ್ರಕರ ಬಳಿ ಮೌಖಿಕವಾಗಿ ದೂರು ನೀಡಿದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿತ್ತಿಲ್ಲ. ಪುರುಷ ಶೌಚಾಲಯದಲ್ಲಿ ಉಚಿತವಿದ್ದು ಮಹಿಳಾ ಶೌಚಾಲಯದಲ್ಲಿ ಮೂತ್ರಕ್ಕೆ 2 ರೂ ಪಡೆಯಲು ಅವಕಾಶವಿದೆ. ಆದರೂ ಕೂಡ ಸಂಚಾರಿ ನಿಯಂತ್ರಕರ ಹೊಂದಾಣಿಕೆಯಿಂದ ಈ ರೀತಿ ಶೌಚಾಲಯದ ಗುತ್ತಿಗೆದಾರರು ದಂದೆಗೆ ಇಳಿಸಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ ತಾವು ಈ ವಿಚಾರವನ್ನು ಪರಿಶೀಲಿಸಿ ಶೌಚಾಲಯದ ಗುತ್ತಿಗೆದಾರರಿಗೆ ಸೂಕ್ತ ರೀತಿಯಾಗಿ ಸೂಚನೆ ನೀಡಿ ಮಹಿಳೆಯರು ಮೂತ್ರ ವಿಸರ್ಜನೆಗೆ ಉಚಿತವಾಗಿಯೂ ಹಾಗೂ ಮಲ ವಿಸರ್ಜನೆಗೆ ಸಂಸ್ಥೆಯ ನಿಯಮಾನುಸಾರ 2-3 ರೂ. ತೆಗೆದುಕೊಳ್ಳುವುದಕ್ಕೆ ತಾಕೀತು ಮಾಡಬೇಕು ಎಂದು ಲೋಕೇಶ್ ಆಗ್ರಹಿಸಿದ್ದರು.
Related









