NEWSನಮ್ಮಜಿಲ್ಲೆಮೈಸೂರು

EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಇಪಿಎಸ್‌ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ ಸಂಸದರ ಕಚೇರಿ, ಮನೆ ಮುಂದೆ ಧರಣಿ ನಡೆಸಲು ಇಪಿಎಸ್-95-ಎನ್‌ಎಸಿ ಸಂಘಟನೆ ನಿರ್ಧರಿಸಿದೆ.

ಇತ್ತೀಚೆಗೆ ನಗರದ ಹೈವೇ ವೃತ್ತದ ಬಳಿ ಇರುವ ಪುತಲೀ ಉದ್ಯಾನದಲ್ಲಿ ಆಯೋಜಿಸಿದ್ದ ಇಪಿಎಸ್-95-ಎನ್‌ಸಿ ಸಂಘಟನೆಯ 11ನೇ ಮೈಸೂರು ಜಿಲ್ಲಾ ಮಟ್ಟದ ಮಾಸಿಕ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ

ಇನ್ನು ವೇಳೆ ಮಾತನಾಡಿದ ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್, ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನಿವೃತ್ತ ನೌಕರರ ಧರಣಿಯಲ್ಲಿ ಕನಿಷ್ಠ ಪಿಂಚಣಿ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿ ಮಾತನಾಡಿದ ಸಂಘಟಣೆಯ ಜಿಲ್ಲಾ ಅಧ್ಯಕ್ಷ ಎಂ.ಷಡಕ್ಷರಿ, ಸಂಸದರ ಕಚೇರಿ, ಮನೆ ಮುಂದೆ ಧರಣಿ ಮಾಡಲು ನಾವೆಲ್ಲರೂ ಒಕ್ಕೋರಲಿನಿಂದ ನಿರ್ಧಾರಿಸಿದ್ದು, ನಮ್ಮ ಹೋರಾಟದ ಮುಂದಿನ ಭಾಗವಾಗಿ ಮೈಸೂರು ಮತ್ತು ಚಾಮರಾಜನಗರ ಸಂಸದರ ಮನೆ, ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಈಗ ನಡೆಯುತ್ತಿರುವ ಲೋಕಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಅಲ್ಲದೆ ಈಗಾಗಲೇ ಕಾರ್ಮಿಕ ಮತ್ತು ಹಣಕಾಸು ಸಚಿವರಿಗೆ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ. ಜತೆಗೆ ಡಿಎ, ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು ಎನ್ನುವ ಬೇಡಿಕೆಯನ್ನು ಪ್ರಬಲವಾಗಿ ಮುಂದಿಡಲಾಗಿದೆ ಎಂದರು.

ಕಳೆದ ಏಳೂವರೆ ವರ್ಷದಿಂದ ಈ ಬಗ್ಗೆ ನೊಂದ ನಿವೃತ್ತ ನೌಕರರು ಹೋರಾಟ ಮಾಡುತ್ತಿದ್ದರೂ, ನಮ್ಮ ಸಂಸದರು ಈವರೆಗೆ ಮಾತನಾಡದೇ ಮೌನದಿಂದಿರುವುದು ದುರದೃಷ್ಟಕರ ಎಂದು ಸಂಸದರ ನಡೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದರು.

ಮೈಸೂರು ಜಿಲ್ಲಾ ಸಂಘಟಣೆಯ ಟಿ.ಆರ್. ಶ್ರೀಕಂಠಪ್ರಸಾದ್, ಚಾಮರಾಜನಗರ ಜಿಲ್ಲೆಯ ಸಂಘಟಣೆ ಅಧ್ಯಕ್ಷ ಮಹದೇವ, ಕಾರ್ಯದರ್ಶಿ ಸೋಮಣ್ಣ, ಖಜಾಂಚಿ ನಂಜುಂಡಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ. ಮಹದೇವು, ಜೆ.ಕೆ.ಟೈರ್ಸ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಬಸವಣ್ಣ, ಉಪಾಧ್ಯಕ್ಷ ಬಸವರಾಜು, ರಾಮೇಗೌಡ, ಮುಖಂಡರಾದ ಆರ್. ಉಮೇಶ್ ಹಾಗೂ ಮಹಿಳಾ ನಿವೃತ್ತ ನೌಕರರು, ಸಕ್ಕರೆ ಕಾರ್ಖಾನೆ, ಕರಿಕಲ್ಲು ಗಾಣಿಗರಿಕೆ ಸೇರಿದಂತೆ ಇನ್ನಿತರೆ ಕಾರ್ಮಿಕರು ಇದ್ದರು.

Megha
the authorMegha

Leave a Reply

error: Content is protected !!