NEWSನಮ್ಮಜಿಲ್ಲೆ

ಉತ್ತರಾಖಂಡ್‌ನ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ-ಸದಸ್ಯರ ನಿಯೋಗ ಗ್ರಾಮಾಂತರ ಜಿಲ್ಲೆಗೆ ಭೇಟಿ

ವಿಜಯಪಥ ಸಮಗ್ರ ಸುದ್ದಿ

ಬೆಂಂಗಳೂರು ಗ್ರಾಮಾಂತರ: ಉತ್ತರಾಖಂಡ್ ರಾಜ್ಯದ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ರವಿಶಂಕರ್, ಸದಸ್ಯರಾದ ಜಂಗ್‌ಪಂಗಿ, ಎಂ.ಸಿ. ಜೋಷಿ ಅವರ ನಿಯೋಗವು ಅಧ್ಯಯನಕ್ಕಾಗಿ ಇಂದು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ರಮಗಳ ಕಾರ್ಯವಿಧಾನಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧ ಅವರು ಜಿಪಂ ಅಡಿಯಲ್ಲಿ ಬರುವ ಪಂಚಾಯಿತಿಯ ಜಿಲ್ಲಾ, ತಾಲೂಕು, ಗ್ರಾಮ ಹಂತಗಳು, ಕೂಸಿನ ಮನೆ, ನರೇಗಾ, ಇ-ಸ್ವತ್ತು, ಗ್ರಾಮಗಳ ಸ್ವಚ್ಛತಾ ಕಾರ್ಯ ಮತ್ತು ತ್ಯಾಜ್ಯ ವಿಲೇವಾರಿ ಘಟಕ (ಸ್ವಚ್ಛ ಭಾರತ್ ಮಿಷನ್), ಅರಿವು ಕೇಂದ್ರಗಳು (ಗ್ರಂಥಾಲಯ), ಅಮೃತ ಸರೋವರ ಯೋಜನೆಯಡಿ ಕೆರೆಗಳ ಪುನಶ್ಚೇತನ ಕಾರ್ಯ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ಪಿಪಿಟಿ ಮೂಲಕ ಪ್ರಸ್ತುತ ಪಡಿಸಿದರು.

ನಂತರ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಸೇವೆಗಳು ಕುರಿತು ಮಾಹಿತಿ ಪಡೆದು, ಘನತ್ಯಾಜ್ಯ ವಿಲೇವಾರಿ ಘಟಕ, ಅರಿವು ಕೇಂದ್ರ, ಕೂಸಿನ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೊಡ್ಡಬಳ್ಳಾಪುರ ನಗರಸಭೆಗೆ ಭೇಟಿ ನೀಡಿ ಆಡಳಿತ ವೈಖರಿ, ಕಾರ್ಯವಿಧಾನ, ಆದಾಯ ವಿಧಾನ, ತೆರಿಗೆ, ಕ್ರಿಯಾ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ, ನಗರಸಭೆ ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷ ಮಲ್ಲೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!