ಮೈಸೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೆಹಲಿ ಸುತ್ತ ಗಡಿಗಳಲ್ಲಿ ಫೆಬ್ರವರಿ 13 ರಿಂದ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ನೇತೃತ್ವದಲ್ಲಿ ರೈತರು ನಿರಂತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಜಗ್ಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಇದೇ ನ.26ರಿಂದ ಉಪವಾಸ ಸತ್ಯಾಗ್ರಹ ಅನ್ನದಾತರು ಸಜ್ಜಾಗುತ್ತಿದ್ದಾರೆ.
ಮೈಸೂರು ತಾಲೂಕು ಕಚೇರಿ ಹಿಂಭಾಗದಲ್ಲಿರುವ PWD ಅತಿಥಿ ಗೃಹದಲ್ಲಿ ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ದೇಶದ ರೈತರ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ಧಲೆವಾಲಾ 2024ರ ನವೆಂಬರ್ 26ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಇದು ರೈತರ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಕುರಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ರೈತರಿಗಾಗಿ ನನ್ನ ಜೀವ ಕೊಡಲು ಸಿದ್ಧ ಎಂದು ಜಗಜಿತ್ ಸಿಂಗ್ ಧಲೆವಾಲಾ ಹೋರಾಟಕ್ಕಿಳಿದಿದ್ದಾರೆ ದೇಶಾದ್ಯಂತ ಎಲ್ಲ ರೈತ ಸಂಘಟನೆಗಳು ಒಕ್ಕೂರಲ್ಲಿಂದ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ದೆಹಲಿ ರೈತರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ರಾಜ್ಯದ ಎಲ್ಲ ಜಿಲ್ಲಾ ಅಧಿಕಾರಿಗಳ ಕಚೇರಿಯ ಮುಂದೆ ರೈತ ಸಂಘಟನೆಗಳು ನ.26 ರಂದು ಮೌನ ಧರಣಿ ನಡೆಸಿ ರಾಷ್ಟ್ರಪತಿಗಳಿಗೆ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.
ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲಿಯೂ ದೆಹಲಿ ಹೋರಾಟ ಬೆಂಬಲಿಸಿ ಸಹಸ್ರಾರು ಸಂಖ್ಯೆಯ ರೈತರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ದೆಹಲಿ ರೈತ ಮುಖಂಡರ ಪ್ರಾಣಕ್ಕೆ ಅಪಾಯವಾದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ದೇಶದ ರೈತರು ಸಿಡಿದೆದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಾಗಲಕೋಟೆ, ಬೆಳಗಾವಿ, ಗುಲ್ಬರ್ಗ ಇನ್ನಿತರ ಜಿಲ್ಲೆಗಳಲ್ಲಿ ಕಬ್ಬಿಗೆ ಎಫ್ ಆರ್ ಪಿ ಮೇಲೆ ಹೆಚ್ಚುವರಿ ದರ ನಿಗದಿ ಮಾಡಬೇಕೆಂದು ರೈತರು ಹೋರಾಟ ನಡೆಸುತ್ತಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಮೊದಲೇ ಮುಖ್ಯಮಂತ್ರಿಗಳು ರೈತ ಮುಖಂಡರ ಸಭೆ ಕರೆದು ರಾಜ್ಯಾದ್ಯಂತ ಇರುವ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು
ಅತ್ತಹಳ್ಳಿ ದೇವರಾಜ್, ಎಂ.ಬಿ. ಚೇತನ್, ವಿಶ್ರಾಂತ ಕುಲಪತಿ ಎಂ.ಬಿ. ದಂಡಿನ್, ನಿವೃತ್ತ ಪ್ರಾಂಶುಪಾಲ ಮಹಾದೇವಯ್ಯ, ಡಾ.ವಸಂತ್ ಕುಮಾರ್, ಸಾಹಿತಿ ಬಿಸ್ಲಳ್ಳಿ ವೀರಭದ್ರಪ್ಪ, ಬರಡನಪುರ ನಾಗರಾಜ್, ಕಿರಗಸೂರ ಶಂಕರ, ಮೂಕಹಳ್ಳಿ ಮಹದೇವಸ್ವಾಮಿ, ನೀಲಕಂಠಪ್ಪ, ವಿಜಯೇಂದ್ರ, ಪೈಲ್ವಾನ್ ವೆಂಕಟೇಶ್ ಮುಂತಾದವರು ಇದ್ದರು.