ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಶೇ.45 ವೇತನ ಹೆಚ್ಚಳ ಮಾಡುವ ಜತೆಗೆ ಒಪಿಎಸ್ ಮಾದರಿ ಪಿಂಚಣಿ ವ್ಯವಸ್ಥೆಯನ್ನು ವಿಸ್ತರಿಸಬೇಕು. ಅಲ್ಲದೆ ಬಾಕಿ ಇರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಆಗ್ರಹಿಸಿದೆ.
ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿರುವ ವೇದಿಕೆ, ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಂತೆ ಭಾವಿಸದೇ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದೆ.
ಇನ್ನು ಸರಿಸಮಾನ ವೇತನ, ಇತರ ಸೌಲಭ್ಯಗಳಿಲ್ಲ. ನಿವೃತ್ತರಿಗೆ ಪಿಂಚಣಿ ಇಲ್ಲ. ಇದರಿಂದ ಸಾರಿಗೆ ನೌಕರರು ಸೇವೆಯಲ್ಲಿದ್ದಾಗಲೂ ನೆಮ್ಮದಿಯಾಗಿ ಜೀವನ ಸಾಗಿಸಲಿಕ್ಕೆ ಆಗಿಲ್ಲ. ಇನ್ನು ನಿವೃತ್ತಿ ಬದುಕಿಗೆ ಭದ್ರತೆಯೇ ಇಲ್ಲ ಎಂಬ ಭಾವನೆಯಿಂದ ಖಿನ್ನತೆಗೆ ಒಳಗಾಗಿ ಬಳಲು ವಂತಾಗಿದೆ ಎಂದು ಆರೋಪಿಸಿದರು.
ಸರ್ಕಾರ ಏಳನೇ ವೇತನ ಆಯೋಗದಂತೆ ಈಗಾಗಲೇ ಸರ್ಕಾರಿ ನೌಕರರಿಗೆ ಒಟ್ಟಾರೆ ಶೇ.58.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಮಾಡಿದೆ. ಇದು ಸರ್ಕಾರದ ಎಲ್ಲ ಇಲಾಖೆ ನಿಗಮ ಮಂಡಳಿಗಳ ನೌಕರರಿಗೆ ಒಳ್ಳೆಯ ವೇತನ ಕಲ್ಪಿಸಿಕೊಟ್ಟಿದೆ.
ಆದರೆ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆಯೂ ಇಲ್ಲ, ಏಳನೇ ವೇತನ ಆಯೋಗದ ಅನುಷ್ಠಾನವೂ ಇಲ್ಲ. ಇದರಿಂದ ಸದ್ಯಕ್ಕೆ ಸಾರಿಗೆ ನೌಕರರು ಸರ್ಕಾರಿ ನೌಕರರಿಗಿಂತ ಶೇ.45ರಷ್ಟು ಕಡಿಮೆ ವೇತನ ಪಡೆಯುವಂತಾಗಿದೆ. ಇಷ್ಟು ಪ್ರಮಾಣದ ಕಡಿಮೆ ವೇತನದಲ್ಲಿ ಜೀವನ ದುಸ್ತರವಾಗಿದೆ. ಈ ರೀರಿ ನಡೆಸಿಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ವೇದಿಕೆ ಹೇಳಿದೆ.
ಇನ್ನು ಒಬ್ಬರ ಕಣ್ಣಿಗೆ ಬೆಣ್ಣೆ ಒಬ್ಬರ ಕಣ್ಣಿಗೆ ಸುಣ್ಣ ಎಂಬಂತೆ ಸರ್ಕಾರ ತಾರತಮ್ಯ ಮಾಡುವುದು ಸಲ್ಲ. ಸರ್ಕಾರ ಈಗಲಾದರೂ ಸಾರಿಗೆ ನೌಕರರಿಗೆ ವೇತನ ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ರಾಜ್ಯಾಧ್ಯಕ್ಷ ವೈ.ಎಂ. ಶಿವರಡ್ಡಿ, ಉಪಾಧ್ಯಕ್ಷ ರಫೀಕಹಮದ್ ನಾಗನೂರ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ ಒತ್ತಾಯಿಸಿದ್ದಾರೆ.