ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರ ವೇತನ ಕನಿಷ್ಠ 36,000 ರೂ.ಗಳಿಗೆ ಹೆಚ್ಚಿಸುವ ಜತೆಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡಬೇಕು ಎಂದು ಅಧಿಕಾರಿಗಳು/ ನೌಕರರು ಆಗ್ರಹಿಸಿದ್ದಾರೆ.

ಕಳದೆ 5 ವರ್ಷಗಳಿಂದ ಸರಿಯಾಗಿ ವೇತನ ಪರಿಷ್ಕರಣೆಯಾಗದೆ ನೌಕರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ 7ನೇ ವೇತನ ಆಯೋಗದಂತೆ ಸರ್ಕಾರ ಕನಿಷ್ಠ ವೇತನವನ್ನು 36,000 ರೂ.ಗೆ ಹೆಚ್ಚಿಸಬೇಕು ಎಂದು ನಾಲ್ಕೂ ನಿಗಮಗಳ ನೌಕರರು ಒತ್ತಾಯಿಸಿದ್ದಾರೆ.
ಇದರ ಜತೆಗೆ ಕಳೆದ 2020 ಜನವರಿ 1ರಿಂದ ಜಾರಿಗೆ ಬಂದಿರುವ ವೇತನ ಹೆಚ್ಚಳದ ಶೇ.15ರಷ್ಟರ 38 ತಿಂಗಳ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 8ರಿಂದ ಆರಂಭವಾಗುತ್ತಿರುವ ಅಧಿವೇಶನದ ವೇಳೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ನಡುವೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳಲ್ಲಿ ಬಣಗಳಿದ್ದು, ಒಂದು ಬಣ (ನೌಕರರ ಒಕ್ಕೂಟ) ಸರಿ ಸಮಾನವ ವೇತನ ಬೇಕು. ಅದು ನೀವು ಕಳೆದ ವಿಧಾನ ಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.
ಆದರೆ, ಮತ್ತೊಂದು ಬಣ (ಜಂಟಿ ಕ್ರಿಯಾ ಸಮಿತಿ) ಇಲ್ಲ ನಮಗೆ ಅಗ್ರಿಮೆಂಟ್ ಮೂಲಕವೇ ವೇತನ ಹೆಚ್ಚಳ ಮಾಡಬೇಕು. ಅದು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿದೆ.
ಸಾರಿಗೆ ನಿಗಮಗಳಲ್ಲಿರುವ ಈ ಎರಡು ಬಣಗಳ ಕಚ್ಚಾಟದ ಲಾಭ ಪಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ ನೌಕರರಿಗೆ ಕೊಟ್ಟ ಭರವಸೆ ಈಡೇರಿಸದೆ ಕಾಲದೂಡುತ್ತಿದೆ. ಜತೆಗೆ 38 ತಿಂಗಳ ಹಿಂಬಾಕಿಯನ್ನು ಕೊಡದೆ ನಾಜೂಕಾಗಿ ಜಾರಿಕೊಳ್ಳುತ್ತಿದೆ.
ಹೀಗಾಗಿ ಈ ಎಲ್ಲವನ್ನು ಗಮನಿಸುತ್ತಿರುವ ನೌಕರರು ಸಂಘಟನೆಗಳನ್ನು ಹೊರತುಪಡಿಸಿ ತಮ್ಮ ಕುಟುಂಬ ಸದಸ್ಯರ ನೆರವಿನೊಂದಿಗೆ ಖುದ್ದು ಕುಟುಂಬದವರ ಮೂಲಕವೇ ಹೋರಾಟ ಮಾಡಿ ತಮ್ಮ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಂದೆರಡು ಗೌಪ್ಯ ಸಭೆಗಳು ಕೂಡ ಆಗಿವೆ.
ಇದನ್ನು ಅರಿತ ಸಾರಿಗೆ ನೌಕರರ ಸಂಘಟನೆಗಳು ಈಗ ಈ ಚುಳಿಗಾಲದ ಅಧಿವೇಶನದಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಧರಣಿ ಸತ್ಯಗ್ರಹ ಹಮ್ಮಿಕೊಳ್ಳುವುದಾಗಿ ಹೇಳಿಕೆ ನೀಡುತ್ತಿವೆ. ಆದರೆ, ಪ್ರಮುಖವಾಗಿ ಒಂದು ಬೇಡಿಕೆ ಇಟ್ಟುಕೊಂಡು ಈ ಬಣಗಳು ಹೋರಟಕ್ಕೆ ಮುಂದಾದರೆ ಜಯ ಸಿಗಲಿದೆ ಎಂಬ ಅಭಿಪ್ರಾಯ ನೌಕರರಿಂದ ಕೇಳಿ ಬರುತ್ತಿದೆ.
ಈ ಎಲ್ಲವನ್ನು ಗಮನಿಸಿರುವ ಸಂಘಟನೆಗಳು ಈ ಬಾರಿಯೂ ಪ್ರತ್ಯೇಕವಾಗಿ ಅಧಿವೇಶನದ ವೇಳೆ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವುದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗಾಗಿ ಸರ್ಕಾರ ಯಾರ ಬೇಡಿಕೆ ಈಡೇರಿಸಿಕೊಡುವ ಭರವಸೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Related










