Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯರಾಜಕೀಯ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ: ಡಾ. ಮುಖ್ಯಮಂತ್ರಿ ಚಂದ್ರು ಆತಂಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಹೋಗುವ ನೀತಿಗೆಟ್ಟ ಸರ್ಕಾರವಾಗಿದೆ. ಈ ಸರ್ಕಾರ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ಅಭಿವೃದ್ಧಿ ಮಂತ್ರ ಇಲ್ಲ, ತೆರಿಗೆ ಸಮವಾಗಿ ಹಂಚಿಕೆ ಮಾಡಿಲ್ಲ, ಕೇವಲ ಧಾರ್ಮಿಕ ಪ್ರಚೋದನೆ, ಸರ್ವಾಧಿಕಾರಿ ಧೋರಣೆ ಮತ್ತು ಯಾವುದೇ ಹಂತಕ್ಕಾದರೂ ಹೋಗಿ ಅಧಿಕಾರ ಪಡೆಯುವುದು ಮಾತ್ರ ಬಿಜೆಪಿ ಗುರಿಯಾಗಿದೆ.

ಬಿಜೆಪಿಯೇತರ ಸರ್ಕಾರಗಳು ಇರುವಲ್ಲೆಲ್ಲಾ ಬಿಜೆಪಿ ಆ ಸರ್ಕಾರಗಳನ್ನು ಹತ್ತಿಕ್ಕಲು ನೋಡಿದೆ. ಅನೈತಿಕ ದಾರಿಯಲ್ಲಿ ಸರ್ಕಾರದ ಪತನಕ್ಕೆ ಪ್ರಯತ್ನಿಸಿದೆ. ಅವರ ಪಕ್ಷದ ನಾಯಕರೇ ಡಾ. ಬಿಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಮಾತುಗಳನ್ನಾಡಿದ್ದಾರೆ. ಇದು ಬಿಜೆಪಿಯ ನಿಜಬಣ್ಣ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ನಡೆದುಕೊಂಡ ರೀತಿಯೇ ಅವರು ಪ್ರಜಾಪ್ರಭುತ್ವ ವಿರೋಧಿ ಎನ್ನುವುದಕ್ಕೆ ಸಾಕ್ಷಿ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಆಮ್ ಆದ್ಮಿ ಪಾರ್ಟಿಯ ಮೇಯರ್ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದೆ. ಸ್ವಾಯತ್ತತೆ ಇದ್ದ ಚುನಾವಣಾ ಆಯೋಗವನ್ನೇ ಬದಲು ಮಾಡಿ, ಆಡಳಿತ ಪಕ್ಷವೇ ನಿರ್ಧಾರ ಮಾಡುವಂತೆ ಮಾಡಿದ್ದಾರೆ.

ಮುಂಬರುವ ಚುನಾವಣೆಯೂ ಬಿಜೆಪಿಗೆ ಅನುಕೂಲಕರವಾಗಿರುವಂತೆ ಮಾಡುತ್ತಾರೆ. ಕಪ್ಪು ಹಣ ವಾಪಸ್ ತರ್ತೀವಿ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ತಮ್ಮ ಖಜಾನೆಗೆ ಬರುವಂತೆ ಮಾಡಿದೆ. ಇದಕ್ಕೆ ಸಿಬಿಐ, ಇಡಿ ಇಲಾಖೆಗಳನ್ನು ಬಳಸಿಕೊಂಡು ಶ್ರೀಮಂತರನ್ನು ಹೆದರಿಸಿ, ಚುನಾವಣಾ ಬಾಂಡ್‌ ಮೂಲಕ ಕೋಟಿ ಕೋಟಿ ಹಣ ಸಂಗ್ರಹಿಸಿದ್ದಾರೆ ಎಂದು ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

ತಮಿಳುನಾಡು, ಪಂಜಾಬ್‌ನಲ್ಲಿ ರಾಜ್ಯಪಾಲರ ಮೂಲಕ ಸರ್ಕಾರಕ್ಕೆ ತೊಂದರೆ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ಪುಲ್ವಾಮ ದಾಳಿ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಕ್ಕೆ ಅವರ ಮೇಲೆ ಇ.ಡಿ, ಸಿಬಿಐ ದಾಳಿ ಮಾಡಿಸುತ್ತಿದೆ. ದೆಹಲಿಯಲ್ಲಿ ರಾಜ್ಯಪಾಲರಿಗೆ ಅಧಿಕಾರ ಕೊಟ್ಟು ರಾಜ್ಯ ಸರ್ಕಾರದ ಕೈಕಟ್ಟಿಹಾಕುವ ಕುತಂತ್ರ ಮಾಡಿದೆ ಎಂದು ದೂರಿದರು.

ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ನಾಯಕರ ವಿರುದ್ಧ ಇ.ಡಿ, ಸಿಬಿಐ ದಾಳಿ ಮಾಡುತ್ತಿದ್ದಾರೆ. ಒಂದು ರೂಪಾಯಿ ಅಕ್ರಮ ಹಣ ಸಿಗದೇ ಇದ್ದರೂ ಅವರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ಬಂಧಿಸಲಾಗಿದೆ. ಈಗ ಕೇಜ್ರಿವಾಲ್ ಅವರನ್ನು ಬಂಧಿಸಲು ಕುತಂತ್ರ ಮಾಡಲಾಗುತ್ತಿದೆ. ಅವರನ್ನು ಬಂಧಿಸಿದರೆ ಆಮ್ ಆದ್ಮಿ ಪಾರ್ಟಿ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ. ನಾವು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದು ಹೇಳಿದರು.

ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರನ್ನು ಕೇಂದ್ರ ಸರ್ಕಾರ ಉಗ್ರರಂತೆ ನಡೆಸಿಕೊಳ್ಳುತ್ತಿದೆ. ದೇಶದ ಗಡಿಯಲ್ಲಿ ಕೂಡ ಇರದ ಭದ್ರತೆಯನ್ನು ರೈತರನ್ನು ತಡೆಯಲು ಬಳಕೆ ಮಾಡಿದೆ. ಇದುವರೆಗೂ ನಾಲ್ವರು ರೈತರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯುವುದಿಲ್ಲ. ದೇಶದ ಮತದಾರರು ಈ ಬಗ್ಗೆ ಯೋಚನೆ ಮಾಡಬೇಕು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದರು, 2022ರ ವೇಳೆಗೆ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದರು. ಜನ ಅವರನ್ನು ಪ್ರಶ್ನೆ ಮಾಡಬೇಕು ಎಂದರು.

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಆಧಾರ ಸ್ಥಂಭ ಅಂತಹ ಚುನಾವಣೆಯನ್ನೇ ಬಿಜೆಪಿ ತನ್ನಿಷ್ಟದಂತೆ ಮಾಡಲು ಹೊರಟಿದೆ. ಮೇಯರ್ ಚುನಾವಣೆಯಲ್ಲೇ ಬಿಜೆಪಿ ಇಷ್ಟು ಮೋಸ ಮಾಡಿದರೆ, ಲೋಕಸಭಾ ಚುನಾವಣೆಯನ್ನು ಯಾವ ಮಟ್ಟದಲ್ಲಿ ಪಾರದರ್ಶಕವಾಗಿ ನಡೆಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ವಾರ ಕೇಜ್ರಿವಾಲ್‌ರನ್ನು ಬಂಧಿಸಲು ಬಿಜೆಪಿ ಸಂಚು ಮಾಡಿದೆ. ಅವರನ್ನು ಬಂಧಿಸಿದರೆ ದೇಶಾದ್ಯಂತ ಹೋರಾಟ ನಡೆಯಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯ ಖಜಾಂಚಿ ಪ್ರಕಾಶ್ ನಡುಮಿಡಿ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿಮಠ, ಉಷಾ ಮೋಹನ್, ಗುರು ಮೂರ್ತಿ, ವಿಶ್ವನಾಥ್, ಹರಿಹರನ್, ಮೊಹ್ನೀಶ್, ಜಗದೀಶ್ ಚಂದ್ರ, ರವಿಕುಮಾರ್, ಗೋಪಾಲ್, ರಾಜ್ಯದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ