ಸ್ವಾಮಿನಾಥನ್ ವರದಿ ಜಾರಿಯಾದರೆ ರೈತರ ಅಭಿವೃದ್ಧಿ: ಮೋಹನ್ ದಾಸರಿ
ಬೆಂಗಳೂರು: 2020ರಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದಾಗ ಬೆಂಬಲ ಬೆಲೆ ಕೊಡುವುದಾಗಿ, ರೈತರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟಿದ್ದ ಕೇಂದ್ರ ಸರ್ಕಾರ ಇಂದು ಮಾತು ತಪ್ಪಿದ್ದು, ರೈತರ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ, ಕೇಂದ್ರ ಸರ್ಕಾರದ ದಮನಕಾರಿ ನೀತಿ ಖಂಡಿಸಿ ಆಮ್ ಆದ್ಮಿ ಪಾರ್ಟಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ದಾಸರಿ, ಇಡೀ ದೇಶದ ರೈತರ ಅನುಕೂಲಕ್ಕಾಗಿ ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕನಿಷ್ಠ ಬೆಂಬಲ ಬೆಲೆಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಹೇಳಿರುವಂತೆ ಕನಿಷ್ಠ ಬೆಂಬಲ ಬೆಲೆ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಕೊಟ್ಟ ಕೇಂದ್ರ ಸರ್ಕಾರ, ಅವರು ಕೊಟ್ಟಿರುವ ವರದಿಯನ್ನು ಈಡೇರಿಸಲು ಮುಂದಾಗಿಲ್ಲ ಎಂದರು.
ಸ್ವಾಮಿನಾಥನ್ ಅವರ ವರದಿ ಪ್ರಕಾರ ಬೆಂಬಲ ಬೆಲೆ ಕೊಟ್ಟರೆ ರೈತರ ಬದುಕು ಸುಧಾರಿಸುತ್ತದೆ. ಆದರೆ, ಕೇಂದ್ರ ಸರ್ಕಾರಕ್ಕೆ ರೈತರ ಹಿತ ಮುಖ್ಯವಲ್ಲ. ರಾಮನನ್ನು ಚುನಾವಣೆಗೆ ಬಳಸುವ ಬಿಜೆಪಿ ರಾಮರಾಜ್ಯದ ಕಲ್ಪನೆಯನ್ನು ಮರೆತಿದೆ ಎಂದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, 2 ವರ್ಷಗಳ ಹಿಂದೆ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ದೆಹಲಿಯಲ್ಲಿ ಭಾರಿ ಪ್ರತಿಭಟನೆ ಮಾಡಿದಾಗ, ಅವುಗಳನ್ನು ಹಿಂಪಡೆಯಲಾಯಿತು. ಈಗಲೂ ಹಲವು ರಾಜ್ಯಗಳಲ್ಲಿ ಈ ಕೃಷಿ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಕೂಡ ಈ ಕೃಷಿ ಕಾಯ್ದೆ ಜಾರಿಯಾಗಿದ್ದು, ಇದನ್ನು ವಾಪಸ್ ಪಡೆದಿಲ್ಲ, ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದರು.
ಪಂಜಾಬ್, ಹರಿಯಾಣದಲ್ಲಿ ರೈತರು ಮಾಡುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ಹೀಯಾಳಿಸುತ್ತಿದೆ. ರೈತರು ಸೂಟು ಬೂಟು ಹಾಕುತ್ತಾರೆ, ಕಾರಿನಲ್ಲಿ ಬರುತ್ತಾರೆ ಎನ್ನುತ್ತಾರೆ. ಅದು ಅವರ ಕಷ್ಟದ ದುಡಿಮೆ, ರೈತರ ಬಳಿ ಕಾರು ಇರಬಾರದ, ಸೂಟು ಬೂಟು ಹಾಕಬಾರದ ಎಂದು ಪ್ರಶ್ನಿಸಿದರು. 200 ಕೃಷಿ ಸಂಘಟನೆಗಳು ಒಟ್ಟಾಗಿ ಮಾಡುವ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ, ಇದು ರೈತ ವಿರೋಧಿ ಸರ್ಕಾರ ಎಂದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ, ನವಲಿ ಹಿರೇಮಠ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಪುಟ್ಟಣ್ಣ, ವಿಶ್ವನಾಥ್, ಜಗದೀಶ್ ಬಾಬು, ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಶಿವಕುಮಾರ್, ರಾಜ್ಯ ಕಾರ್ಯದರ್ಶಿ ರವಿಕುಮಾರ್, ಗೋಪಾಲ್ ಸೇರಿದಂತೆ ಅನೇಕ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.