
ಬೆಂಗಳೂರು: ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಸಿ ನಂತರ ಮಾತನಾಡಿ ಡಿಸಿ, ಭಾರತ ದೇಶ ಕಂಡ ಅಪ್ರತಿಮ ಮಹಾನ್ ಧೀಮಂತ ವ್ಯಕ್ತಿ, ನಮಗೆ ಸಂವಿಧಾನವನ್ನು ರಚಿಸಿಕೊಟ್ಟ, ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನಮ್ಮ ಡಾ.ಬಿ.ಆರ್ ಅಂಬೇಡ್ಕರ್ ಅವರದು ಎಂದರು.
ಇನ್ನು ಅವರು ಸುಮಾರು 32 ಪದವಿಗಳನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಎಷ್ಟೇ ಮಾತನಾಡಿದರು ಅದು ಕಡಿಮೆ, ಅವರ ಸಾಧನೆ ಒಂದು ಜನಾಂಗಕ್ಕೆ ಮಾತ್ರ ಸೀಮಿತ ಅಲ್ಲ, ಇಡೀ ಜಗತ್ತಿಗೆ ಅವರು ಮಾಡಿರುವ ಸಾಧನೆ ಅಗಾಧ ಎಂದು ಹೇಳಿದರು.
ಅಂಬೇಡ್ಕರ್ ಅವರು ನಡೆದ ದಾರಿಯಲ್ಲಿ ಇಂದಿನ ಯುವ ಜನಾಂಗವು ಸಾಗಬೇಕು, ಅಂಬೇಡ್ಕರ್ ಅವರ ರೀತಿಯಲ್ಲಿ ಯುವ ಜನಾಂಗವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ದೇಶದಲ್ಲಿ ಇನ್ನೂ ಮಹತ್ತರವಾದ ಬದಲಾವಣೆಯನ್ನು ಕಾಣಬಹುದು. ಇಂದು ನಾವು ಅವರ 134ನೇ ಜನ್ಮ ದಿನಾಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆಯ ಕ್ಷಣವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್. ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಜಿಲ್ಲಾ ಮಟ್ಟದ ಅಧಿಕಾರಿಗಳು ದಲಿತ ಸಂಘಟನೆಗಳು, ಜನಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.