ಸರ್ಕಾರಿ ನೌಕರರ 100 ಕುಟುಂಬಗಳಿಗೆ ಅನುಕಂಪದ ನೇಮಕಾತಿ ಆದೇಶ ಪತ್ರ ವಿತರಣೆ: ಸಚಿವ ದಿನೇಶ್ ಗುಂಡೂರಾವ್


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ನಿವೃತ್ತಿಗೂ ಮೊದಲೇ ನಿಧನರಾದ 100 ಸರ್ಕಾರಿ ನೌಕರರ ಕುಟುಂಬದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಿಕೊಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಫಲಾನುಭವಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಬಳಿಕ ಮಾತನಾಡಿದ ಸಚಿವರು, ಕುಟಂಬಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದವರನ್ನು ಕಳೆದುಕೊಂಡಾಗ ದೊಡ್ಡ ಆಘಾತವಾಗುತ್ತದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆನ್ನುವ ನಿಯಮವಿದ್ದರೂ ಸಾಕಷ್ಟು ವಿಳಂಬವಾಗುತ್ತದೆ. ಆದರೆ, ನಮ್ಮ ಸರ್ಕಾರ ಯಾರನ್ನೂ ಅಲೆದಾಡಿಸದೇ ತಕ್ಷಣ ಉದ್ಯೋಗ ನೀಡಿದೆ ಎಂದು ತಿಳಿಸಿದರು.
ಸದ್ಯ 116 ಮಂದಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗಿದ್ದು, ಇನ್ನೂ 60 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಕೂಡ ಅತಿ ಶೀಘ್ರದಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಇದೇ ವೇಳೆ ಸಚಿವ ಗುಂಡೂರಾವ್ ಭರವಸೆ ನೀಡಿದರು.
ಸರ್ಕಾರಿ ಕೆಲಸ ಪಡೆದುಕೊಂಡವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲಾಖೆಗೆ, ಸಮಾಜಕ್ಕೆ ಮಾದರಿಯಾಗಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ನೇಮಕಾತಿಗೆ ಬೇಕಾದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರ ಉದ್ಯೋಗ ಸಿಗುವಂತೆ ಮಾಡಿರುವ ಕೆಲಸ ಶ್ಲಾಘನೀಯ ಎಂದರು.
ಇನ್ನು ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನುಸಾರವಾಗಿ ಆರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಆರೋಗ್ಯಾಧಿಕಾರಿ, ಗ್ರೂಪ್ ಡಿ ದರ್ಜೆ ಹುದ್ದೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.

Related
