ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಅನುಮಾನ ಇದೆ ಎಂದು ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಗ್ಗಿಲ್ಲದ ವರ್ಗಾವಣೆ ದಂಧೆ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಮಂತ್ರಿ ಮಹೋದಯರುಗಳ ವರ್ಗಾವಣೆ ದಂಧೆ ನಿಜವೆಂಬುದು ಅವರದೇ ಪಕ್ಷದ ಹಿರಿಯ ಶಾಸಕ ಬಿ.ಆರ್. ಪಾಟೀಲರ ಪತ್ರದಿಂದ ಸಾಬೀತಾಗುತ್ತಿದೆ ಎಂದರು.
ಕಾಂಗ್ರೆಸ್ ನವರಿಗೆ ಕೇವಲ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಕಳ್ಳತನ ಮಾಡುವುದು ಗೊತ್ತಿದೆಯೇ ಹೊರತು, ಭ್ರಷ್ಟಾಚಾರ ಮುಕ್ತ ಸರ್ಕಾರ ಇದ್ದಲ್ಲಿ ಮಾತ್ರ ಈ ರೀತಿಯ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬಹುದು ಮತ್ತು ದೆಹಲಿ ಮಾದರಿಯ ಸಾಲ ಮುಕ್ತ ಬಜೆಟ್‌ಗಳನ್ನು ಘೋಷಿಸಬಹುದು ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಚುನಾವಣಾ ಅಕ್ರಮಗಳಿಗಾಗಿ ಖರ್ಚು ಮಾಡಿರುವ ಹಣವನ್ನು ಕೂಡಲೇ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕೆಂಬ ದಾವಂತ ಕಾಂಗ್ರೆಸ್ ಶಾಸಕರಲ್ಲಿ ಇರುವುದು ಬಿ.ಆರ್. ಪಾಟೀಲರ ಪತ್ರದಿಂದ ಸ್ಪಷ್ಟವಾಗುತ್ತಿದೆ ಎಂಬ ಅನುಮಾನ ರಾಜ್ಯದ ಜನತೆಯಲ್ಲಿ ಹಾಗೂ ನಮ್ಮಲ್ಲೂ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದಲ್ಲಿ ಯೋಜನೆಗಳಿಗಾಗಿ ಯಾವುದೇ ಹಣವಿಲ್ಲ. ಶಾಸಕರಾರು ಅನುದಾನಕ್ಕಾಗಿ ಒತ್ತಾಯ ಮಾಡಬಾರದೆಂದು ಹೇಳುತ್ತಾರೆ. ಯೋಜನೆಗಳಲ್ಲಿ ಯಾವುದೇ ಕಮಿಷನ್ ಬಾರದ ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆಯೇ ಇವರಿಗೆ ಗಟ್ಟಿ ಎಂದರು.
ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಸೂಲಿ ಮಾಡುವುದೊಂದೇ ಈಗಿರುವ ಏಕೈಕ ಮಾರ್ಗ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯನು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಗಳಿಂದಾಗಿ ಪರಿತಪ್ಪಿಸುವುದು ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ಗೌಡರು ಯಾರೊಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೆ ತದ್ವಿರುದ್ಧವಾಗಿ ಅವರ ಮಗ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ ಎಂಬ ಹೇಳಿಕೆ ನೀಡುತ್ತಿರುವುದು ದ್ವಂದ್ವದಿಂದ ಕೂಡಿದೆ. ಇಬ್ಬರು ಒಟ್ಟಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜನತೆಗೆ ಯಾರೊಂದಿಗೆ ಕೈಜೋಡಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.