ಬೆಂಗಳೂರು: ಎರಡನೇ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ಸಮೀಪಿಸಿದರೂ ಕೇಂದ್ರ ಪುರಸ್ಕೃತ 61 ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಪ್ರತಿಭಟಿಸಿ ಕೇಂದ್ರದ ಅನುದಾನ ಶೀಘ್ರ ಬಿಡುಗಡೆಗೆ ಮಾಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮ್ ಆದ್ಮಿ ಪಕ್ಷ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು,ಪತ್ರ ಬರೆದ ಡಾ.ಮುಖ್ಯಮಂತ್ರಿ ಚಂದ್ರು ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಅಂತ್ಯಕ್ಕೆ ಸಮೀಪಿಸಿದರೂ ಒಂದೇ ಒಂದು ಪೈಸೆ ಅನುದಾನವನ್ನು ಕರ್ನಾಟಕ ರಾಜ್ಯಕ್ಕೆ ಕೊಟ್ಟಿಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ನಂ.2 ಸ್ಥಾನದಲ್ಲಿರುವ ಕರ್ನಾಟಕಕ್ಕೆ ಈ ಪರಿಯ ಅನ್ಯಾಯ ಎಸಗುತ್ತಿರುವುದು ಏಕೆ?
ಆಗಸ್ಟ್‌ನಲ್ಲಿ ತೆರಿಗೆ ಸಂಗ್ರಹ ಶೇ.16ರಷ್ಟು ವೃದ್ಧಿಯಾಗಿದ್ದು 11,116 ಕೋಟಿ ರೂ.ಗೆ ಮುಟ್ಟಿದೆ. ಜಿಎಸ್‌ಟಿ ಪರಿಹಾರವನ್ನು ಕೊಡುತ್ತಿಲ್ಲ. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡುಗಾಸೂ ಬಿಡುಗಡೆ ಮಾಡುತ್ತಿಲ್ಲ. ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳು ಬಂದ್ ಎಂದಿದ್ದರು. ಅವರ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆಯೇ?
ಒಟ್ಟು 23 ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ 61 ಯೋಜನೆಗಳಿಗೆ ಆಗಸ್ಟ್ ತಿಂಗಳು ಕಳೆದರೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರೆ ಏನರ್ಥ? ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕೆ ಈ ಅನ್ಯಾಯವನ್ನು ಎಸಗಲಾಗುತ್ತಿದೆಯೇ? 25 ಸಂಸದರನ್ನು ಕೊಟ್ಟಿರುವ ಕರ್ನಾಟಕದ ಬಗ್ಗೆ ಅನುದಾನ ವಿಚಾರದಲ್ಲಿ ತಿರಸ್ಕಾರವೇಕೆ? ಕರ್ನಾಟಕ ಭಾರತದಲ್ಲಿ ಇಲ್ಲವೇ? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದ ರಾಜಧರ್ಮದ ಪಾಠವನ್ನು ನೆನಪಿಸಿಕೊಳ್ಳಬೇಕು.
ಒಂದೆಡೆ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿ ರಾಜ್ಯವನ್ನು ಕಾಂಗ್ರೆಸ್ ಸಂಕಷ್ಟಕ್ಕೆ ತಳ್ಳುತ್ತಿದೆ. ರಾಜ್ಯದಲ್ಲಿ ಪೂರಕ ಮಳೆಯಾಗದೆ ಬರಗಾಲ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟಿದೆ.
ಇನ್ನೊಂದೆಡ ಕೇಂದ್ರ ಸರ್ಕಾರ ನರೇಗಾ, ಗ್ರಾಮ ಸಡಕ್, ಪಿಎಂ ಆವಾಸ್ ಯೋಜನೆ, ಪಿಂಚಣಿ ಮುಂತಾದ ಕೇಂದ್ರ ಪುರಸ್ಕೃತ ಪ್ರಮುಖ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡದೆ ಗಾಯದ ಮೇಲೆ ಬರೆ ಎಳೆದಿದೆ.
ಈ ಯೋಜನೆಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡರೆ ಬಡವರ, ಶ್ರಮಿಕರ, ಮಹಿಳೆಯರ ಜೀವನೋಪಾಯದ ಮೇಲೆ ಪರಿಣಾಮ ಬೀಳುತ್ತದೆ. ದ್ವೇಷ ರಾಜಕಾರಣವನ್ನು ಬಿಟ್ಟು ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಿರುವ ಅನುದಾನವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಹೊಣೆಗಾರಿಕೆ ತೆಗೆದುಕೊಂಡು ಅನುದಾನವನ್ನು ಬಿಡುಗಡೆ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಆಯಾ ಇಲಾಖೆಗಳ ಮೂಲಕ ಅನುದಾನ ವಿಳಂಬಗೊಳ್ಳುತ್ತಿರುವ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕು.
ಬಿಜೆಪಿ, ಕಾಂಗ್ರೆಸ್ ನಡುವಣ ದ್ವೇಷ ರಾಜಕಾರಣಕ್ಕೆ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿದ್ದರೆ ದೊಡ್ಡ ಮಟ್ಟದ ಹೋರಾಟ ಸಂಘಟಿಸಲಾಗುವುದು. ನಮ್ಮ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ದಯವಿಟ್ಟು ಬಿಡುಗಡೆ ಮಾಡಿ ಎಂದು ನಾಡಿನ ಜನತೆಯ ಪರವಾಗಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
ಡಾ.ಮುಖ್ಯಮಂತ್ರಿ ಚಂದ್ರು
ಎಎಪಿ