NEWSನಮ್ಮರಾಜ್ಯಬೆಂಗಳೂರು

ಮನೆ ಮನೆಗೆ ಇ-ಖಾತೆ ತಲುಪಿಸುವ ಇ-ಖಾತಾ ಮೇಳ ಅರ್ಥಪೂರ್ಣ ಕಾರ್ಯಕ್ರಮ: ಸಚಿವ ಭೈರತಿ ಸುರೇಶ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇ-ಖಾತಾ ಮೇಳವು ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಸದುದ್ದೇಶವನ್ನು ಹೊಂದಿರುವ ಅರ್ಥಪೂರ್ಣ ಕಾರ್ಯಕ್ರಮ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್.ಸುರೇಶ್ (ಭೈರತಿ) ತಿಳಿಸಿದರು.

ಪಾಲಿಕೆಯ ಹೆಬ್ಬಾಳ‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಟಿ.ನಗರದ ಎಚ್.ಎಮ್.ಟಿ ಮೈದಾನದಲ್ಲಿ ಇಂದು ಹಾಗೂ ನಾಳೆ ಹಮ್ಮಿಕೊಂಡಿರುವ ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿ, ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ ಎಂದು ತಿಳಿಸಿದರು.

ಈಗಾಗಲೇ ಹೆಬ್ಬಾಳ‌ ವಿಧಾನಸಭಾ ಕ್ಷೇತ್ರದಲ್ಲಿ 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ. ನಾಗರೀಕರು ಇ-ಖಾತಾ ಮೇಳದ ಸದುಪಯೋಗ ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತಾವನ್ನು ಪಡೆಯುವಂತೆ ನಾಗರೀಕರಲ್ಲಿ ವಿನಂತಿಸಿದರು.

ಪೂರ್ವ ವಲಯದ ಆಯುಕ್ತರಾದ ಶ್ರೀಮತಿ ಸ್ನೇಹಲ್.ಆರ್ ರವರು ಮಾತನಾಡಿ ಪೂರ್ವ ವಲಯದಲ್ಲಿ ಇ-ಖಾತಾ ಮೇಳದ ಆಯೋಜನೆಯ ಮೂಲಕ‌ ಸುಲಭವಾಗಿ ಇ-ಖಾತಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದು ತಿಳಿಸಿದರು.

ಇ-ಖಾತಾ ಮೇಳದ‌ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಇ-ಖಾತಾ ಪಡೆಯುವಂತೆ ಅವರು ತಿಳಿಸಿದರು.

ಈ ವೇಳೆ ಮಾಜಿ ಉಪ ಮಹಾಪೌರರು, ವಲಯ ಆಯುಕ್ತರಾದ ಸ್ನೇಹಲ್.ಆರ್, ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯರುಗಳು, ಸ್ಥಳೀಯ ಹಿರಿಯ ಮುಖಂಡರುಗಳು, ಹಾಗೂ‌ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!