NEWSದೇಶ-ವಿದೇಶನಮ್ಮಜಿಲ್ಲೆ

ಇಡಿ, ಸಿಬಿಐ, ತೆರಿಗೆ ಇಲಾಖೆ ಎಲ್ಲವೂ ಪ್ರಧಾನಿಗಳ ಗುಲಾಮರಾಗಿ ಕೆಲಸ ಮಾಡುತ್ತಿವೆ: ಡಾ. ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ಸ್ವತಂತ್ರ ಸಂಸ್ಥೆಗಳ ಅಧಿಕಾರಿಗಳು ಸ್ವತಂತ್ರ ಅಧಿಕಾರಿಗಳಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಕ್ರಮವಾಗಿ ಬಂಧಿಸಿರುವುದನ್ನು ವಿರೋಧಿಸಿ ನಗರದ ಸ್ವತಂತ್ರ ಉದ್ಯಾನವನದಲ್ಲಿ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟವು ಬೃಹತ್‌ ಶಾಂತಿಯುತ ಪ್ರತಿಭಟನೆಯನ್ನು ನಡೆಸಿತು.

ಈ  ವೇಳೆ ಮುಖ್ಯಮಂತ್ರಿ ಚಂದ್ರು   ಮಾತನಾಡಿ,  ಕಳೆದ 10 ವರ್ಷಗಳಲ್ಲಿ ನಾವು ನೋಡಿದ್ದು ಪ್ರಜಾಪ್ರಭುತ್ವದ ಕಗ್ಗೋಲೆ, ವಿವಿಧತೆಯಲ್ಲಿ ಏಕತೆಯಿಂದಿರುವ ಭಾರತದ ನಾಶ, ಜನತಂತ್ರ ವ್ಯವಸ್ಥೆಯ ಸರ್ವನಾಶ, ಸಂವಿಧಾನ ಬದಲಿಸುವ ಪ್ರಯತ್ನ, ಪಾರದರ್ಶಕತೆ ಇಲ್ಲದ ಆಡಳಿತ, ಕೋಮುಗಲಭೆಗಳಾಗಿವೆ ಎಂದರು.

ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಡಿವಾಣ ಹಾಕುತ್ತಿದ್ದಾರೆ, ದೆಹಲಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ರಾಜ್ಯದ ಆಡಳಿತವನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿದ್ದಾರೆ. ಜೈಲಿನಲ್ಲಿರಬೇಕಾದ ಕಡುಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ, ಮುಖ್ಯಮಂತ್ರಿಗಳನ್ನಾಗಿಸುತ್ತಿದ್ದಾರೆ. ರಾಜಕೀಯ ಎದುರಾಳಿಗಳನ್ನು ಇಡಿ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಸುಳ್ಳು ಪ್ರಕರಣಗಳಡಿ ಆರೋಪಿಗಳಾಗಿಸಿ ಕಿರುಕುಳಕೊಡುತ್ತಿದ್ದಾರೆ. ಈ ದೇಶ ಉಳಿಯಬೇಕೆಂದರೆ ಸರ್ವಾಧಿಕಾರಿಯ ಆಡಳಿತಕ್ಕೆ ಅಂತ್ಯಹಾಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ದುಡ್ಡು ಇರುವವರ ಹತ್ತಿರ ಇ.ಡಿ ಹೋಗುತ್ತೆ. ಆಮೇಲೆ ಒಳಗೆ ಹೋಗ್ತಿರಾ, ಹೊರಗೆ ಇರ್ತಿರಾ ಎಂದು ಕೇಳುತ್ತೆ. ಹೊರಗಿರಬೇಕಾದ್ರೆ ಬಿಜೆಪಿ ಹುಂಡಿಗೆ ಕಾಸು ಹಾಕಿ. ಇಲ್ದೇ ಹೋದ್ರೆ ಒಳಗೋಗಿ. ಇದು ನೂರಾರು ಉದ್ಯಮಿಗಳ ಪರಿಸ್ಥಿತಿಯಾಗಿದೆ. ಸಾವಿರಾರು ಕೋಟಿ ರೂ. ಅಕ್ರಮ ಹಣವನ್ನು ಚುನಾವಣಾ ಬಾಂಡ್‌ ಮೂಲಕ ತನ್ನ ಹುಂಡಿಗೆ ಹಾಕಿಸಿಕೊಂಡು ಸಕ್ರಮ ಮಾಡುತ್ತಿದೆ.

ಸ್ವಿಸ್‌ ಬ್ಯಾಂಕಿನಲ್ಲಿರು ಎಲ್ಲ ಕಳ್ಳ ದುಡ್ಡನ್ನು ತಂದು ಭಾರತದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು 10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ ಅವರೇ ಚುನಾವಣೆ ಬಾಂಡ್‌ ಮೂಲಕ ಸಾವಿರಾರು ಕೋಟಿ ಅಕ್ರಮ ಹಣವನ್ನು ಗುಡ್ಡೆ ಹಾಕಿಕೊಂಡಿದ್ದಾರೆ.

ಸರ್ಕಾರಿ ಆಸ್ತಿಗಳನ್ನು ಒಂದುಕಡೆಯಿಂದ ಮಾರಾಟ ಮಾಡಿಕೊಂಡು ಬಂದಿದ್ದರೆ. ದೇಶದ ಸಾಲವನ್ನು ಕೇವಲ 10 ವರ್ಷಗಳಲ್ಲಿ 200 ಪಟ್ಟು ಹೆಚ್ಚಿದ್ದಾರೆ. ಮೊದಲೆಲ್ಲ ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೆ 50 ಸಾವಿರ ಸಾಲವಿತ್ತು. ಆದರೆ ಈಗ ಬರೋಬ್ಬರಿ 1.5 ಲಕ್ಷ ರೂ. ಸಾಲವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಲೆಗಳ ಅಭಿವೃದ್ಧಿಗೆ ಕೇಜ್ರಿವಾಲ್‌ ಮಾದರಿ: ರಾಮಲಿಂಗಾರೆಡ್ಡಿ: ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿರುವುದನ್ನು ನೋಡಿ ಸ್ಫೂರ್ತಿಗೊಂಡು ನಮ್ಮ ಕ್ಷೇತ್ರದ 22 ಶಾಲೆಗಳನ್ನು ಅಭಿವೃದ್ಧಿಪಡಿಸಿದೆವು. ಮೊದಲು 4,000 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಇದ್ದವರು 5,500 ಮಕ್ಕಳಾಗಿದ್ದಾರೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದರು.

‘ಇಂಡಿಯಾ’ ಒಕ್ಕೂಟದ ಭಾಗವಾಗಿ ಕಾಂಗ್ರೆಸ್‌ ಪ್ರತಿನಿಧಿಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಗರ ಪೂರ್ವಜರು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ನವರಾಗಿದ್ದಾರೆ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ.

ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಸಂವಿಧಾನ ವಿರೋಧಿಗಳಾಗಿದ್ದಾರೆ. ಭಾರತದಲ್ಲಿ ಈಗ ಸರ್ವಾಧಿಕಾರ ಚಾಲ್ತಿಯಲ್ಲಿದೆ. ಸಂವಿಧಾನ ಬದಲಾದ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಹೇಗಿತ್ತೋ ಆ ಪರಿಸ್ಥಿತಿಗೆ ಕೊಂಡೊಯ್ಯುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

2ಜಿ ಹಗರಣದಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಅಕ್ರಮ ನಡೆದಿರುವುದನ್ನು ಸಾಬೀತು ಪಡಿಸಲಾಗಲಿಲ್ಲ. ಆದರೂ ಅವುಗಳು ಭಾರತದ ಅತಿದೊಡ್ಡ ಹಗರಣಗಳೆಂದು ಸುಳ್ಳು ಬಿತ್ತಿದರು. ಅಬಕಾರಿ ನೀತಿ ಹಗರಣದಲ್ಲಿಯೂ ಎಎಪಿ ಪಾತ್ರದ ಬಗ್ಗೆ ನಿರಂತರವಾಗಿ ಸುಳ್ಳು ಹಬ್ಬಿಸಲಾಗುತ್ತಿದೆ.

ಆದರೆ ಎರಡು ವರ್ಷಗಳೇ ಕಳೆದರೂ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲಾಗಿಲ್ಲ. ಚುನಾವಣೆ ಬಾಂಡ್‌ ಮೂಲಕ ಸಾವಿರಾರು ಕೋಟಿ ಅಕ್ರಮ ಎಸಗಿರುವುದು ಕಣ್ಮುಂದೆ ಇದ್ದರೂ ಬಿಜೆಪಿ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಒಳ್ಳೆಯ ದಿನಗಳು ಬರಲಿವೆ. ಕೇಜ್ರಿವಾಲ್‌ ಆರೋಪ ಮುಕ್ತರಾಗಲಿದ್ದಾರೆ. ಬಿಜೆಪಿಯ ಎಲ್ಲ ಭ್ರಷ್ಟರು ಜೈಲು ಸೇರಲಿದ್ದಾರೆ ಎಂದು ಆಶಾಯ ವ್ಯಕ್ತಪಡಿಸಿದರು.

ಸಿಪಿಐಎಂ ಮುಖಂಡ ಜಿ.ಎನ್‌.ನಾಗರಾಜ್‌ ಮಾತನಾಡುತ್ತ, ಭಾರತ ದೇಶದಲ್ಲಿ ಅಧಿಕಾರದಲ್ಲಿರುವುದು ಮೋದಿ ಎನ್ನಲಾಗುತ್ತಿದೆ. ಆದರೆ ಮೋದಿ ಹಿಂದಿರುವ ಆರ್‌ಎಸ್‌ಎಸ್‌ ಈ ದೇಶವನ್ನು ನಿಯಂತ್ರಿಸುತ್ತಿದೆ. ಮನುವಾದಿ, ಕೋಮು ದ್ವೇಷದ ಚಿಂತನೆಗಳನ್ನು ಹೊಂದಿರುವ, ಸರ್ವಾಧಿಕಾರಿ ಧೋರಣೆಯ ಆರ್‌ಎಸ್‌ಎಸ್‌ ಕಳೆದ ನೂರು ವರ್ಷಗಳಿಂದ ವ್ಯವಸ್ಥಿತವಾಗಿ ಭಾರತವನ್ನು ತನ್ನ ಕೈವಶ ಮಾಡಿಕೊಳ್ಳುತ್ತ ಬಂದಿದೆ.

ಇದೀಗ ಆರ್‌ಎಸ್‌ಎಸ್‌ ಉಚ್ಛ್ರಾಯಸ್ಥಿತಿಯಲ್ಲಿರುವುದು ಆತಂಕಕಾರಿ ವಿಚಾರವಾಗಿದೆ. ಚುನಾವಣೆ ಸಂದರ್ಭ ಕೇಜ್ರಿವಾಲ್‌ ಬಂಧನ, ಕಾಂಗ್ರೆಸ್‌ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಸಂವಿಧಾನ ವಿರೋಧಿ ನಡೆ. ಮಾಜಿ ಪ್ರಧಾನಿಯೊಬ್ಬರನ್ನು ಜೈಲಿನಲ್ಲಿಟ್ಟು ಚುನಾವಣೆಯ ಪಾಕಿಸ್ತಾನದಲ್ಲಿರುವ ಚಿಂತಕರು ಮತ್ತು ಕವಿಗಳು “ಅಯ್ಯೋ ಭಾರತವೇ ನೀನು ನಮ್ಮಂತಾದೆಯಲ್ಲಾ..” ಎಂದು ವಿಷಾಧದಿಂದ ಕವಿತೆಗಳನ್ನು ಬರೆಯುತ್ತಿದ್ದಾರೆ ಎಂದರು.

ಎಸ್‌ಡಿಪಿಐನ ಅಬ್ದುಲ್‌ ಮಜಿದ್‌, ಸಾಮಾಜಿಕ ಹೋರಾಟಗಾರ ನೂರ್‌ ಶ್ರೀಧರ್‌, ಸಲೀಲ್‌ ಶೆಟ್ಟಿ, ಎಎಪಿ ರಾಜ್ಯ ಉಪಾಧ್ಯಕ್ಷರಾದ ಮೋಹನ್‌ ದಾಸರಿ, ವಿಜಯ್‌ ಶರ್ಮಾ, ರಮೇಶ್‌ ಬೆಲ್ಲಂಕೊಂಡ, ಡಾ. ವೆಂಕಟೇಶ್‌, ಶಾಂತಳಾ ದಾಮ್ಲೆ, ಸಂಪತ್‌ ಶೆಟ್ಟಿ, ನಸೀಮುದ್ದಿನ್‌ ಪಟೇಲ್‌, ರುದ್ರಯ್ಯ ನವಲೀಹೀರೇಮಠ್, ಸುದೇಶ್‌ ರಾಥೋಡ್‌, ವಿವೇಕಾನಂದ ಸಾಲಿನ್ಸ್‌, ಉಮಾಶಂಕರ್‌, ರಾಜ್ಯಪ್ರಧಾನ ಕಾರ್ಯದರ್ಶಿ ಸಂಚಿತ್‌ ಸಹಾನಿ, ಪ್ರಕಾಶ್‌ ನಡುಂನುಡಿ, ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ವಿ. ಸದಂ.

ರಾಜ್ಯ ಸಂಘಟನಾಧ್ಯಕ್ಷರಾದ ಅರ್ಜುನ್ ಹಲಗೀಗೌಡರ್‌, ಬಿ.ಟಿ.ನಾಗಣ್ಣ, ಕುಶಾಲಾ ಗೌಡ, ಸುಷ್ಮ ವಿ. ನವೀನ್‌ ಚಂದ್ರ ಪೂಜಾರಿ, ಲೋಹಿತ್‌ ಹನುಮಾಪುರ, ಫರೀದುದ್ದೀನ್‌ ಷರೀಫ್‌, ರಮೇಶ್‌ ಬಾಬು, ಜಿ.ಸಿ. ಭೈರೆಡ್ಡಿ, ಡಾ. ಸತೀಶ್‌ ಮತ್ತಿತರ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ಅನೇಕ ಮಂದಿ ಪಕ್ಷಾತೀತರಾಗಿ ಪಾಲ್ಗೊಂಡಿದ್ದರು.

ಪ್ರತಿಭಟನೆ ವೇಳೆ ಹೆಚ್ಚಿನವರು ಕಪ್ಪು ಪಟ್ಟಿ ಧರಿಸಿದ್ದರು. ಸಂವಿಧಾನ ವಿರೋಧಿ ನರೇಂದ್ರ ಮೋದಿ, ಭ್ರಷ್ಟ ಮೋದಿ ಧಿಕ್ಕಾರ, ಬಾಂಡ್‌ ಮೋದಿಗೆ ಧಿಕ್ಕಾರ ಘೋಷಣೆಗಳು ಕೇಳಿಬಂದವು.

Leave a Reply

error: Content is protected !!
LATEST
ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು