KSRTC ನಾಲ್ಕೂ ನಿಗಮಗಳ ನೌಕರರು: 5-6 ವರ್ಷಗಳಿಂದ ಕಾರ್ಮಿಕ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಧೂಳುಹಿಡಿಯುತ್ತಿವೆ ಸಾವಿರಾರು ಪ್ರಕರಣಗಳು

ಬೆಂಗಳೂರು: ಕರ್ನಾಟಕ ರಾಜ್ಯದ ಕಾರ್ಮಿಕ ನ್ಯಾಯಾಲಯಗಳಲ್ಲಿ ಹಾಗೂ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ 2021ರ ಮುಷ್ಕರದಲ್ಲಿ ಭಾಗಿಯಾಗಿದ್ದಾರೆಂಬ ಕಾರಣ ನೀಡಿ ವಜಾಗೊಳಿಸಿದ್ದರ ವಿರುದ್ಧ ರಾಜ್ಯದ ವಿವಿಧೆಡೆ ಕಾರ್ಮಿಕ ನ್ಯಾಯಾಲಯಗಳಲ್ಲಿ ನೂರಾರು ಪ್ರಕರಣಗಳನ್ನು ಹೂಡಿದ್ದು ಅವು ಈವರೆಗೂ ಇತ್ಯರ್ಥವಾಗದೇ ಧೂಳುಹಿಡಿಯುತ್ತಿದ್ದು, ಇನ್ನೂ ಪಾಟಿ ಸವಾಲು ಹಂತದಲ್ಲೇ ಇವೆ.

ಒಂದು ವೇಳೆ ಕಾರ್ಮಿಕ ನ್ಯಾಯಾಲಯದಲ್ಲಿ ವಜಾಗೊಂಡ ನೌಕರ/ ಸಿಬ್ಬಂದಿಗಳನ್ನು ಹಿಂಬಾಕಿ ವೇತನದೊಂದಿಗೆ ಮರು ನೇಮಕಗೊಳಿಸುವಂತೆ ಕಾರ್ಮಿಕ ನ್ಯಾಯಾಲಯ ಆದೇಶಿಸಿದರೂ ಸಹ ಸಂಸ್ಥೆ ಮರು ನೇಮಕಗೊಳಿಸದೆ ರಾಜ್ಯ ಉಚ್ಚ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸುತ್ತದೆ. ಅಲ್ಲಿಯೂ ಕಾರ್ಮಿಕರ ಪರ ತೀರ್ಪು ಬಂದರೂ ಸಹ ಮತ್ತೊಂದು ಪೀಠಕ್ಕೆ ಮೇಲ್ಮನವಿ ಸಲಿಸಲಾಗುತ್ತದೆ. ಅಲ್ಲಿಯೂ ಕಾರ್ಮಿಕರ ಪರವಾಗಿ ತೀರ್ಪು ಬಂದರೂ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮಮನವಿ ಸಲ್ಲಿಸಲಾಗುತ್ತದೆ.
ಇನ್ನು ಈ ಪ್ರಕ್ರಿಯೆಗಳು ಮುಗಿಯುವಷ್ಟರಲ್ಲಿ ಸಾರಿಗೆ ನೌಕರರು ನಿವೃತ್ತರಾಗಿಯೋ ಅಥವಾ ಇನ್ನಾವುದೋ ಕಾರಣಕ್ಕೆ ಸಂಸ್ಥೆಯಿಂದಲೇ ಹೊರಬಂದಿರುತ್ತಾರೆ. ಕೆಲವರು ಇಹಲೋಕವನ್ನೇ ಬಿಟ್ಟು ಹೋಗಿರುತ್ತಾರೆ. ಇದರ ನಡುವೆ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿರುವ ಒಂದೆರಡು ಪ್ರಕರಣಗಳನ್ನು ಇರಬಹುದೇನೋ ಗೊತ್ತಿಲ್ಲ.
ನಿವೃತ್ತಿಯ ಅಂಚಿನಲ್ಲಿದ್ದ ನೂರಾರು ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳ 2021ರ ಮುಷ್ಕರದಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ. ಇದರಿಂದ ನಿವೃತ್ತಿಯ ನಂತರ ದೊರೆಯುವ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಇನ್ನೂ ಸಾವಿರಾರು ನೌಕರರಿಗೆ ಸಾಧ್ಯವಾಗಿಲ್ಲ. ನಿವೃತ್ತಿಯ ನಂತರ ಮಗಳ/ ಮಗನ ಮದುವೆಗೆಂದೋ, ಮನೆ ಕಟ್ಟಲೆಂದೋ, ನಿವೃತ್ತಿಯ ನಂತರ ಬದುಕು ಕಟ್ಟಿಕೊಳ್ಳಲೆಂದೋ ಉಳಿಸಿರುವ ಹಣ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಕಾರಣ ಪ್ರಕರಣ ನ್ಯಾಯಾಲಯದಲ್ಲಿದ್ದು ಇತ್ಯರ್ಥವಾಗದಿರುವುದು.
ಸಾರಿಗೆ ಸಂಸ್ಥೆಯ ಎಲ್ಲ ಚಾಲಕ, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ಕೊಡುವ ಸಂಘಟನೆಗಳ ಮುಖ್ಯಸ್ಥರನ್ನು ಕೇಳಬೇಕು, ಸಂಸ್ಥೆಯಲ್ಲಿ ಸರ್ಕಾರ ನೇಮಿಸಿರುವ ಐಎಎಸ್, ಐಪಿಎಸ್, ಐಎಪ್ಎಸ್ ಹೊರತು ಪಡಿಸಿ ಉಳಿದ ಎಲ್ಲ ಅಧಿಕಾರಿಗಳು/ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗುವರೇ ಎಂದು? ಅವರು ಭಾಗವಹಿಸದ ಮುಷ್ಕರಗಳಿಗೆ ಚಾಲಕ, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಇನ್ನು ಮುಂದೆ ಬಲಿಯಾಗುವುದು ಬೇಡ.
ಬೇರೆಲ್ಲ ನಿಗಮ ಮಂಡಳಿಗಳಲ್ಲಿ ಕಾಲ ಕಾಲಕ್ಕೆ ವೇತನ ಪರಿಷ್ಕರಿಸುತ್ತಿರುವಾಗ ಸಾರಿಗೆ ನೌಕರರಿಗೆ ಏಕೆ ತಾರತಮ್ಯ ಮಾಡಲಾಗುತ್ತಿದೆ? ಜಾತಿಗೊಂದು ಸಂಘಟನೆಗಳಿಂದ ಹೊರ ಬಂದು ಸಂಘಟಿತ ಅಧಿಕಾರಿಗಳ ಒಳಗೊಂಡ ಸಂಘಟನೆಯೊಂದಿಗೆ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟರೆ ಇದು ಸಾಧ್ಯ.
ಬಹುಶಃ: ಈ ರಾಜ್ಯದಲ್ಲಿ 79ಕ್ಕೂ ಹೆಚ್ಚು ನಿಗಮ ಮಂಡಳಿಗಳು ಇವೆ. ಆದರೆ ಸಾರಿಗೆ ಸಂಸ್ಥೆಯ ನೌಕರರೇ ಏಕೆ ಮುಷ್ಕರ ನಡೆಸಿ ಸರ್ಕಾರದಿಂದ ವೇತನ ಹೆಚ್ಚಿಸಿಕೊಳ್ಳಬೇಕು. ಬೇರೆ ನಿಗಮ ಮಂಡಳಿಗಳು ಮುಷ್ಕರ ನಡೆಸದೆಯೇ ತಮ್ಮ ಸಿಬ್ಬಂದಿಗಳ ವೇತನ ಪರಿಷ್ಕರಿಸಿಕೊಳ್ಳುತ್ತಿರುವಾಗ ಸಾರಿಗೆ ಸಂಸ್ಥೆಗಳ ನೌಕರರು ಏಕೆ ಮುಷ್ಕರಕ್ಕೆ ಮೊರೆ ಹೋಗಬೇಕು? ಈವರಗೆ ಆಡಳಿತ ರಾಜ್ಯದ ಎಲ್ಲ ಪಕ್ಷಗಳ ಮುಖ್ಯಸ್ಥರು ಹಾಗೂ ಮಂತ್ರಿಮಹೋದಯರು ಈ ಪ್ರಶ್ನೆಗೆ ಉತ್ತರಿಸಬೇಕು.
ನಮ್ಮ ಅನುಭವದಲ್ಲಿ ಹೇಳುತ್ತೇನೆ, ಬೇರೆಲ್ಲ ನಿಗಮ ಮಂಡಳಿಗಳ ಸಂಘಟನೆಗಳ ಮುಖ್ಯಸ್ಥರು ಆಯಾ ಸರ್ಕಾರಗಳ ಸಚಿವರೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಸಿಬ್ಬಂದಿಗಳಿಗೆ ಏನು ಬೇಕೋ ಅದನ್ನು ಸುಲಲಿತವಾಗಿ ಈಡೇರಿಸಿಕೊಳ್ಳುತ್ತಿದ್ದಾರೆ. ಆದರೆ ಸಾರಿಗೆ ನಿಗಮಗಳ ಸಂಘಟನೆಗಳು ದಶ ದಿಕ್ಕುಗಳ ಕಡೆ ಮುಖ ಮಾಡಿ ಸಂಘಟಿತರಾಗಿ ಒಟ್ಟಿಗೆ ಕೂತು ಸಂಬಂಪಟ್ಟ ಸಚಿವರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇವರಿಂದ ಸಾದ್ಯವಾಗುತ್ತಿಲ್ಲ. ಇನ್ನು ಮುಂದಾದರು ಎಲ್ಲ ಸಂಘಟನೆಗಳು ಒಟ್ಟಿಗೆ ಒಂದೇ ಸಭೆಯಲ್ಲಿ ಕೂತು ಚರ್ಚಿಸಿ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳನ್ನು ಬಲಿ ಕೊಡುವಂತ ಕಾರ್ಯಕ್ಕೆ ಕೈಹಾಕದೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು.
ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನನ್ನದೊಂದು ಮನವಿ, ತಾವು ಸಮಾಜವಾದಿ, ಅಂಬೇಡ್ಕರ್ ಸಂವಿಧಾನ ಒಪ್ಪಿಕೊಂಡವರು, ಎಲ್ಲರಿಗೂ ಸಮಾನತೆ ಬಯಸುವವರು ತಮ್ಮ ಅಧಿಕಾರದ ಅವಧಿಯಲ್ಲಿಯೇ ದಿನದ 24 ಗಂಟೆಗಳು ರಾಜ್ಯಾದ್ಯಂತ ಹಾಗೂ ಅಂತಾರಾಜ್ಯಗಳಲ್ಲೂ ಸಂಚರಿಸುವ ಬಸ್ಸುಗಳಲ್ಲಿ ಕರ್ತವ್ಯ ನಿರ್ವಹಿಸಿ ನಿಮಗೂ, ನಿಮ್ಮ ಸರ್ಕಾರಕ್ಕೂ, ನಿಮ್ಮ ಪಕ್ಷಕ್ಕೂ, ವಿಶ್ವ ದಾಖಲೆಯ ಪುಸ್ತಕದಲ್ಲಿ ಗುರುತಿಸುವಂತಾಗಿದ್ದು ಶ್ರಮಜೀವಿ ಸಾರಿಗೆ ನೌಕರರ ಪ್ರಾಮಾಣಿಕ ಸೇವೆಯಿಂದ ಎಂಬುದನ್ನು ಮರೆಯದೆ ಕೂಡಲೇ ರಾಜ್ಯದ ಬೇರೆ ನಿಗಮ ಮಂಡಳಿಗಳಿಗೆ ನೀಡಿರುವಂತೆ ಸರಿಸಮಾನ ವೇತನವನ್ನು ಹೆಚ್ಚಿಸಿ ತಾವು ಕೊಟ್ಟ ಮಾತನ್ನು ಉಳಿಸಿಕಲೊಳ್ಳುವ ಮೂಲಕ ಸಾರಿಗೆ ನೌಕರರನ್ನು ಗೌರವಿಸಿ. ಅಧಿಕಾರ ಶಾಶ್ವತವಲ್ಲ ತಮ್ಮ ಅಧಿಕಾರದಲ್ಲಿ ತಾವು ತೆಗೆದುಕೊಂಡ ನಿರ್ಧಾರಗಳು ಶಾಸ್ವತವಾಗಿ ಉಳಿಯುತ್ತವೆ.
ಇನ್ನು ಈ ಹಿಂದೆ ನಡೆದ ಮುಷ್ಕರದಲ್ಲಿ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದಾಗಿ ವಜಾಗೊಳಿಸಿದ ಸರ್ಕಾರ ಹೇಳಿತು. ಆದರೆ ಮಾಡಿದ್ದೇನು. ಯಾವುದೇ ಹಿಂಬಾಕಿಯಿಲ್ಲದೆ, 1-2 ವಾರ್ಷಿಕ ವೇತನ ಬಡ್ತಿಗಳನ್ನು ಕಡಿತಗೊಳಿಸಿ/ಮುಂದೂಡಿ, ಮುಷ್ಕರದಲ್ಲಿ ಭಾಗಿಯಾಗುವುದಿಲ್ಲ ಎಂಬ ಷರತ್ತುಗಳೊಂದಿಗೆ ಮರು ನೇಮಕ ಮಾಡಿಕೊಂಡಿತು. ಆದರೆ, ಈವರೆಗೆ ಯಾರಿಗೂ ವಜಾಗೊಂಡ ಅವಧಿಯಿಂದ ಮರುನೇಮಕ ಗೊಂಡ ಅವಧಿಗೆ ಹಿಂಬಾಕಿ ವೇತನ ನೀಡಿಲ್ಲ. ಇದನ್ನೂ ತಮ್ಮ ಸರ್ಕಾರ ಸರಿಪಡಿಸಬೇಕು ಎಂದು ನಮ್ಮ ಸಮಸ್ತ ನೌಕರರ ಮನವಿಯಾಗಿದೆ ಎಂದು ಸಂಚಾರ ನಿಯಂತ್ರಕ ಎನ್.ಶ್ರೀನಿವಾಸ್ ವಿನಂತಿಸಿದ್ದಾರೆ.
Related









