ಬೆಂಗಳೂರು: ಕನಿಷ್ಠ ಪಿಂಚಣಿ 7500 ರೂ. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ EPS-95 ನಿವೃತ್ತ ಪಿಂಚಣಿದಾರರು ಇದೇ ಅ.9ರಂದು ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಪ್ರತಿಭಟನೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಹಾಗೂ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಈ ಪ್ರತಿಭಟನಾ ಸಭೆ ಆಯೋಜಿಸಲಾಗಿದ್ದು ಎಲ್ಲ ಇಪಿಎಸ್ ನಿವೃತ್ತರು ತಪ್ಪದೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಭೆಗೆ ವಿಶೇಷ ಆಹ್ವಾನಿತರಾಗಿ ರಾಜ್ಯ ಉಚ್ಚ ನ್ಯಾಯಾಲಯ ವಕೀಲರಾದ ಎಸ್.ಬಿ. ಮುಕ್ಕಣ್ಣಪ್ಪ, ಶ್ರೀಧರಪ್ರಭು, ಎಂ. ಸುಬ್ರಹ್ಮಣ್ಯಭಟ್ ಹಾಗೂ ಎಂ.ಆರ್.ವರುಣ್ ಅವರು ಆಗಮಿಸಲಿದ್ದಾರೆ.
ಈ ಎಲ್ಲ ವಕೀಲರು ಕೂಡ ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಹಾಗೂ ಇತ್ತೀಚಿಗೆ ಹಲವು ರಾಜ್ಯಗಳ ಉಚ್ಛ ನ್ಯಾಯಾಲಯಗಳು ನೀಡಿರುವ ತೀರ್ಪಿನ ಬಗ್ಗೆ ಕಾನೂನಾತ್ಮಕ ಅಂಶಗಳನ್ನು ಪ್ರಸ್ತುತಪಡಿಸಲಿದ್ದಾರೆ.
ನಮ್ಮ ಬಹುದಿನಗಳ ಬೇಡಿಕೆ, ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ.ಗಳನ್ನು ಕೊಡಬೇಕು ಎಂಬುವುದು ನಮ್ಮ ಪ್ರಮುಖ ಹೋರಾಟವಾಗಿದೆ.
ಅಲ್ಲದೆ ಸಿಬಿಟಿ ಸಭೆ ಅಕ್ಟೋಬರ್ 11, 12, 2025 ರಂದು ನಗರದಲ್ಲಿ ನಡೆಯುತ್ತಿರುವುದರಿಂದ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಈ ಪ್ರತಿಭಟನಾ ಸಭೆ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತರು, ವಿವಿಧ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ರಾಜ್ಯಾದ್ಯಂತ ಇರುವ ಎಲ್ಲ ಇಪಿಎಸ್ ನಿವೃತ್ತರು ಆಗಮಿಸಿ ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ಮನವಿ ಮಾಡಿದ್ದಾರೆ.
Related
