EPS ಪಿಂಚಣಿದಾರರ 30ನೇ ಬೃಹತ್ ಪ್ರತಿಭಟನಾ ಸಭೆ ಯಶಸ್ವಿ: ನಂಜುಂಡೇಗೌಡ


ಬೆಂಗಳೂರು: ಇಪಿಎಸ್ ಪಿಂಚಣಿದಾರರ 30ನೇ ಬೃಹತ್ ಪ್ರತಿಭಟನಾ ಸಭೆ ಸೋಮವಾರ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗಿತು.
ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ. ಕೂಡಲೇ ನೀಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಸರ್ಕಾರ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದಕ್ಕೂ ಮೊದಲು ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರ ಕುರಿತು ಮಾತನಾಡಿ ಬಿಎಂಟಿಸಿ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ಇಪಿಎಸ್ ನಿವೃತ್ತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಏಳೆಂಟು ವರ್ಷಗಳಿಂದ ನಡೆಸಿದ ಹೋರಾಟದ ಬಗ್ಗೆ ಸಮಗ್ರ ವಿವರ ನೀಡಿದರು.
ಸಂಘದ ಅಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಅಕ್ಟೋಬರ್ 09, 2025 ರಂದು ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜರುಗುವ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಸಮಾವೇಶ, ಇದೇ ಅಕ್ಟೋಬರ್ 11,12, 2025 ರಂದು ಬೆಂಗಳೂರಿನಲ್ಲಿ ಜರುಗುವ ಸಿಬಿಟಿ ಸಭೆಯಲ್ಲಿ ಇಪಿಎಸ್ ನಿವೃತ್ತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾದ ಹೋರಾಟಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ರಾಜ್ಯ ಉಚ್ಚ ನ್ಯಾಯಾಲಯದ ನಾಲ್ಕು ಜನ ವಕೀಲರು ಭಾಗವಹಿಸಲಿದ್ದು, ಸರ್ವೋಚ್ಚ ನ್ಯಾಯಾಲಯ ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪುಗಳ ಬಗ್ಗೆ ವಿಶ್ಲೇಷಿಸಿ, ಜಂಟಿ ಆಯ್ಕೆ ಪತ್ರ ಸಲ್ಲಿಸಿರುವ ಎಲ್ಲಾ ಇಪಿಎಸ್ ನಿವೃತ್ತರು ಅಧಿಕ ಪಿಂಚಣಿಗೆ ಹೇಗೆ? ಅರ್ಹರು ಎಂಬ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ. ಏನೇ ಆಗಲಿ ಈ ಬೃಹತ್ ಪ್ರತಿಭಟನಾ ಸಭೆ ನಿವೃತ್ತರ ದಿಕ್ಕನ್ನೇ ಬದಲಿಸಲಿದೆ ಎಂದು ತಿಳಿಸಿದರು.
ಸಂಘದ ಕಾರ್ಯಾಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಇದುವರೆಗೂ ನಡೆಸಿದ, ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಫಲ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ, ಇದುವರೆಗೂ ನಾವು ನಡೆಸಿದ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ, ನಿಮ್ಮ ಬೆಂಬಲ ಹಾಗೂ ಸಹಕಾರ ಇದೇ ರೀತಿಯಾಗಿ ಮುಂದುವರಿಯಲಿ ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಇಪಿಎಸ್ ನಿವೃತ್ತರು ಬೀದಿಗಿಳಿದು ಹೋರಾಟ ಮಾಡಬೇಕು, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು, ಈ ಸಿಬಿಟಿ ಸಭೆಯಲ್ಲಿ, ನಮ್ಮ ಎಲ್ಲಾ ಬೇಡಿಕೆಗಳು ಈಡೇರದೆ ಹೋದಲ್ಲಿ, ಉಗ್ರ ಹೋರಾಟಕ್ಕೆ ಸಿದ್ಧ ಎಂಬ ಸಂದೇಶ ನೀಡಿದರು.
ಟ್ರಸ್ಟ್ ಖಜಾಂಚಿ, ರಮೇಶ್ ಎಂ ನಾರಾಯಣಸ್ವಾಮಿ ಹಾಗೂ ಡಿ.ವಿ. ನಾರಾಯಣಸ್ವಾಮಿ ಇನ್ನೂ ಹಲವಾರು ಮುಖಂಡರು ಇದ್ದರು. ಅಂತಿಮವಾಗಿ ಇಪಿಎಫ್ಒ ಅಧಿಕಾರಿಗಳು ನಮ್ಮ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈ ಪ್ರತಿಭಟನಾ ಸಭೆಯ ಸಂಪೂರ್ಣ ವಿವರಗಳನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿನ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿದರು.
ನಮ್ಮ ಸಂಘದ ಪದಾಧಿಕಾರಿಗಳಾದ ರಂಗನಾಥ್, ಮನೋಹರ್, ನಾಗರಾಜು, ರುಕ್ಮೆಶ್ ಹಾಗೂ ಕೃಷ್ಣಮೂರ್ತಿ ಹಾಜರಿದ್ದು, ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಪ್ರತಿಭಟನಾ ಸಭೆ ಅತ್ಯಂತ ಆವೇಶಭರಿತವಾಗಿದ್ದು, ಕೇಂದ್ರ ಸರ್ಕಾರಕ್ಕೆ ಹಾಗೂ ಇಪಿಎಫ್ಒ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆ ಗಂಟೆ ಆಗಿದೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
Related
