ಬೆಂಗಳೂರು: ಇಪಿಎಸ್-95, ಪಿಂಚಣಿದಾರರ 97ನೇ ಮಾಸಿಕ ಸಭೆಯನ್ನು ಲಾಲ್ ಬಾಗ್ ಆವರಣದಲ್ಲಿ ಫೆಬ್ರವರಿ 1ರ ಭಾನುವಾರ ಬೆಳಗ್ಗೆ 8ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸಭೆಯಲ್ಲಿ, ಇತ್ತೀಚೆಗೆ ನಿಧನರಾದ ಕಾಮ್ರೇಡ್ ಅನಂತ ಸುಬ್ಬರಾವ್ ಅವರಿಗೆ ನುಡಿ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಆದ, ಅನಂತ ಸುಬ್ಬರಾವ್ ಇನ್ನಿಲ್ಲ ಎಂಬುದನ್ನು ತಿಳಿದ ಸಾರಿಗೆ ನೌಕರರಿಗೆ ಬರ ಸಿಡಿಲು ಬಡಿದಂತಾಗಿದೆ. ದಣಿವರಿಯದ ಕಾರ್ಮಿಕ ನಾಯಕನ ಸಾವನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರು ನಿರೀಕ್ಷಿಸಿರಲಿಲ್ಲ !!!.
ಐದು ದಶಕಗಳ ಕಾಲ, ಕಾರ್ಮಿಕರ ಧ್ವನಿಯಾಗಿ, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಚೇತನ ಇನ್ನಿಲ್ಲ ಎಂಬುದನ್ನು ಕಂಡು, ಸಂಸ್ಥೆಯ ಸಮಸ್ತ ಕಾರ್ಮಿಕರು ದುಃಖ ಸಾಗರದಲ್ಲಿ ಮುಳುಗಿದ್ದಾರೆ ಎಂದರೆ ತಪ್ಪಾಗಲಾರದು. ಅಗಲಿದ ಕಾರ್ಮಿಕ ನಾಯಕನಿಗೆ ರಾಜ್ಯದ ಮುಖ್ಯಮಂತ್ರಿಯಾದಿಯಾಗಿ, ಈ ನಾಡಿನ ಹಲವಾರು ಗಣ್ಯರು, ಕಾರ್ಮಿಕರು ಸಾಗರೋಪಾದಿಯಲ್ಲಿ ಆಗಮಿಸಿ, ಸಲ್ಲಿಸಿದ ಅಂತಿಮ ನಮನ “ನಮ್ಮ ನಾಯಕ ಮತ್ತೆ ಹುಟ್ಟಿ ಬರಲಿ” ಎಂಬ ಜಯ ಘೋಷಣೆ, ಅಗಲಿದ ನಮ್ಮ ನಾಯಕನಿಗೆ ಕೇಳಿಸುವಂತಿತ್ತು.
ಸಕಲ ಸರ್ಕಾರಿ ಗೌರವಗಳೊಂದಿಗೆ, (ನಾಡಿನ ಜನತೆ) ಅಂತಿಮ ಗೌರವ ಸಲ್ಲಿಸಲಾಯಿತು. ಇಷ್ಟೊಂದು ಜನ ಮನ್ನಣೆ ಪಡೆಯಬೇಕಾದರೆ, ಆತ ನಿಜವಾದ ಕಾರ್ಮಿಕ ನಾಯಕನಾಗಿದ್ದಾಗ ಮಾತ್ರ ಸಾಧ್ಯ. ಏನೇ ಆಗಲಿ, ಸಾರಿಗೆ ಸಂಸ್ಥೆಯಲ್ಲಿ ಕಮ್ಯುನಿಸ್ಟ್ ಸಿದ್ದಾಂತವನ್ನು ಪ್ರತಿಪಾದಿಸಿ, ಅದರಲ್ಲಿ ಯಶಸ್ಸು ಕಂಡ ಅತ್ಯಂತ ಅಪ್ರತಿಮ ಮುಖಂಡನನ್ನು ಕಳೆದುಕೊಂಡು ಸಂಸ್ಥೆಯು ಬಡವಾಗಿದೆ. ಈ ಸ್ಥಾನವನ್ನು ತುಂಬಲು ಮತ್ತೊಬ್ಬ ಅನಂತ ಸುಬ್ಬರಾಯರನ್ನು ಕಾಣಲು ಸಾಧ್ಯವಿಲ್ಲ.
ಇನ್ನು ನೌಕರರ 38 ತಿಂಗಳ ವೇತನ ಪರಿಷ್ಕರಣೆ ಬಾಕಿ, ಜನವರಿ 01, 2024 ರಿಂದ ಅನ್ವಯವಾಗುವಂತೆ ಕೈಗಾರಿಕಾ ಒಪ್ಪಂದವನ್ನು ರಾಜ್ಯ ಸರ್ಕಾರ ಜಾರಿ ಮಾಡಿದಾಗ ಮಾತ್ರ, ಅನಂತ ಸುಬ್ಬರಾಯರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದ್ದಾರೆ.
ಈ ಮಾಸಿಕ ಸಭೆಗೆ ಹಲವಾರು ಕಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಅಗಲಿದ ಕಾರ್ಮಿಕ ನಾಯಕನ ಕುರಿತು ಮಾತನಾಡಲಿದ್ದಾರೆ. ಇದಕ್ಕೂ ಮೊದಲು, ಮೃತರ ಆತ್ಮಕ್ಕೆ ಶಾಂತಿ ಕೋರಿ, ಎರಡು ನಿಮಿಷ, ನಿರ್ಮಲ ವಾತಾವರಣದಲ್ಲಿ ಮೌನಾಚರಣೆ ನಡೆಸಲಾಗುವುದು.
ಮೊನ್ನೆ ನಗರದ ಇಪಿಎಫ್ಓ ಕಚೇರಿ ಆವರಣದಲ್ಲಿ, ಕೇಂದ್ರ ಸರ್ಕಾರದ ಬಜೆಟ್ ಪೂರ್ವ ಅಂದರೆ, ಕೇಂದ್ರ ಹಣಕಾಸು ಸಚಿವರು ಫೆ.1ರಂದು, 2025-26 ನೇ ಸಾಲಿನ ಆರ್ಥಿಕ ಆಯವ್ಯಯ ಬಜೆಟ್ ಮಂಡಿಸಲಿದ್ದು, ಈ ಹಿನ್ನೆಲೆಯಲ್ಲಿ ಇಪಿಎಸ್ ಪಿಂಚಣಿದಾರರು ತಮ್ಮ ಬೇಡಿಕೆಗಳ ಬಗ್ಗೆ, ನಡೆಸಿದ ಪ್ರತಿಭಟನಾ ಸಭೆ ಸಂಚಲನ ಮೂಡಿಸಿದ್ದು, ಇಪಿಎಫ್ಒ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಿದೆ. ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರಲ್ಲಿ ಸಾಕಷ್ಟು ಜಾಗೃತಿ ಹಾಗೂ ಅರಿವು ಮೂಡಿಸಿದೆ. 78 ಲಕ್ಷ ಇಪಿಎಸ್ ನಿವೃತ್ತರು, ನಮ್ಮ ಬೇಡಿಕೆಗಳ ಬಗ್ಗೆ ಬಜೆಟ್ ಘೋಷಣೆಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
2020ರ ನಂತರ ನಿವೃತ್ತರಾದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ತಮ್ಮ ನಿವೃತ್ತಿಯ ನಂತರ ಸಂಸ್ಥೆಯಿಂದ ತಮಗೆ ಬರಬೇಕಾದ 38 ತಿಂಗಳ ವೇತನ ಪರಿಷ್ಕರಣ ಬಾಕಿ, ಜ.1ರಿಂದ ಕೈಗಾರಿಕಾ ಒಪ್ಪಂದ, ಗ್ರ್ಯಾ ಚುಟಿ, ಪಿಎಫ್, ರಜೆ ನಗದೀಕರಣ ಹಾಗೂ ಹೈಯರ್ (higher) ಪಿಂಚಣಿ, ಇತ್ಯಾದಿ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ ಕೂಡಲೆ ಎಚ್ಚೆತ್ತುಕೊಂಡು, ಪ್ರತಿ ಜಿಲ್ಲೆಯಲ್ಲಿಯೂ ಸಂಸ್ಥೆಯ ಹೆಸರಿನಲ್ಲಿ ಸಂಘ ಸ್ಥಾಪಿಸಿ, ಮನವಿ ಪತ್ರ ನೀಡುವ ಮೂಲಕ ಹೋರಾಟದ ಮಾಡದ ಹೊರೆತು, ಈಗಿನ ಕಾಲದಲ್ಲಿ ಸುಖ ಸುಮ್ಮನೇ ಸವಲತ್ತು ಪಡೆಯಲು ಸಾಧ್ಯವಿಲ್ಲ. ಹತ್ತು ಜನ ಸೇರಿ ನೊಂದಣಿ ಶುಲ್ಕ 1,000 ರೂ.ಕೊಟ್ಟು ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆ ರೀತ್ಯ, ಸಹಕಾರ ಸಂಘಗಳ ಕಚೇರಿಯಲ್ಲಿ ಸಂಘವನ್ನು ನೋಂದಾವಣೆ ಮಾಡಿಕೊಂಡು ಮುಂದುವರೆಯುವುದು ಸೂಕ್ತ ಎಂದು ಅಭಿಪ್ರಾಯ ಪಡಲಾಗಿದೆ.
78 ಲಕ್ಷ ಇಪಿಎಸ್ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ಕೇಂದ್ರ ಸರ್ಕಾರದ ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು ಪ್ರಯತ್ನಿಸೋಣ ಎಂದು ಕರೆ ನೀಡಿದ್ದಾರೆ.
ಹೀಗಾಗಿ 97ನೇ ಮಾಸಿಕ ಸಭೆಗೆ ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯದ ಜತೆಗೆ ಈ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು 1/02/2026 ರ ಭಾನುವಾರ ಬೆಳಗ್ಗೆ 8ಗಂಟೆಗೆ ಆಗಮಿಸಬೇಕು ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.
Related










