ಕನಿಷ್ಠ ಪಿಂಚಣಿ 7500 ರೂ. ಪಡೆಯಲು EPS ಪಿಂಚಣಿದಾರರ ನಿರಂತರ ಹೋರಾಟ- 92ನೇ ಮಾಸಿಕ ಸಭೆಯಲ್ಲಿ ಹಲವು ನಿರ್ಧಾರಗಳು

ಬೆಂಗಳೂರು: ಇಪಿಎಸ್ ಪಿಂಚಣಿದಾರರ 92ನೇ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಭಾನುವಾರ ನಡೆದ ಈ ಮಾಸಿಕ ಸಭೆಗೆ ಬೆಳಗಿನ ಹವಾಮಾನ ವೈಪರಿತ್ಯವನ್ನು ಲೆಕ್ಕಿಸದೆ ನೂರಾರು ಇಪಿಎಸ್ ನಿವೃತ್ತರು ಆಗಮಿಸಿದ್ದು, ಎಂದಿನಂತೆ ಹೂದೋಟದಲ್ಲಿ ಲಘುಬಗೆಯಿಂದ ವಾಯುವಿಹಾರ ನಡೆಸಿ, ಸ್ಥಳಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಈ ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
1) ಇಪಿಎಸ್ ನಿವೃತ್ತರ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದು, ನಮ್ಮ ಮೂಲಭೂತ ಬೇಡಿಕೆ 7,500 ರೂ. + ಭತ್ಯೆ, ವೈದ್ಯಕೀಯ ಸೌಲಭ್ಯ ಶೀಘ್ರ ಈಡೇರಿಕೆಗಾಗಿ ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
2) ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠವು ಇದೇ ಸೆ.2ರಂದು ಇಪಿಎಸ್ ನಿವೃತ್ತರ ಪರ (ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ) ನೀಡಿರುವ ತೀರ್ಪನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು ಹಾಗೂ ಅದರ ಸಾಧಕ ಬಾದಕಗಳ ಬಗ್ಗೆಯೂ ಸಹ ಸದಸ್ಯರಿಗೆ ಸೂಕ್ತ ಮನವರಿಕೆ ಮಾಡಿಕೊಡಲಾಯಿತು.
3) ನಮ್ಮ ರಾಜ್ಯ ಉಚ್ಚ ನ್ಯಾಯಾಲಯದಲ್ಲಿಯೂ ಸಹಾ ಇಪಿಎಸ್ ನಿವೃತ್ತರು ಮಧುರೈ ಉಚ್ಚ ನ್ಯಾಯಾಲಯದ ಪೀಠವು ನೀಡಿರುವ ತೀರ್ಪು ಅನುಸರಿಸಿ, ಇಪಿಎಫ್ಒ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದ್ದು, ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು.
4) ಮಧುರೈ ಹೈಕೋರ್ಟಿನ ತೀರ್ಪು 2014ರ ನಂತರ ನಿವೃತ್ತರದ ಇಪಿಎಸ್ ಪಿಂಚಣಿದಾರರಿಗೆ ಮಾತ್ರ ಅನ್ವಯಿಸಲಿದ್ದು, ಬಿಎಚ್ಇಎಲ್ (ಭಾರತ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್) ರವರು ಈಗಾಗಲೇ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇದೇ ಮಾದರಿಯ ನೂರಾರು ರಿಟ್ ಅರ್ಜಿಗಳನ್ನು ಇಪಿಎಫ್ಒ ಅಧಿಕಾರಿಗಳ ವಿರುದ್ಧ ದಾಖಲೆ ಮಾಡಿದ್ದು, ಇಂದಿನ ಸಭೆಯಲ್ಲಿ ಚರ್ಚಿಸಿದಂತೆ ಆಸಕ್ತ ಇಪಿಎಸ್ ನಿವೃತ್ತರು (ಬಿಎಂಟಿಸಿ & ಕೆಎಸ್‌ಆರ್‌ಟಿಸಿ) ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು, ವಕೀಲರ ಜೊತೆ ನೇರ ಚರ್ಚಿಸಿ ಮುಂದುವರಿಯಬಹುದು.

ಈ ಬಗ್ಗೆ ನಮ್ಮ ಸಂಘ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಬದ್ಧವಾಗಿದೆ. ಮುಂದೆ ಬಿಎಚ್ಇಎಲ್ ಪ್ರಕರಣಗಳಲ್ಲಿ ನ್ಯಾಯಾಲಯವು ನೀಡುವ ತೀರ್ಪು ಸಮಸ್ತ ಇಪಿಎಸ್ ನಿವೃತ್ತರಿಗೆ ಅನ್ವಯವಾಗುತ್ತದೆ. ಏಕೆಂದರೆ ಆರ್‌ಸಿ ಗುಪ್ತ, ಏಕಾಂಗಿಯಾಗಿ ಹೋರಾಟ ಮಾಡಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, 2016ರಲ್ಲಿ ತನ್ನ ಪರ ಪಡೆದಿರುವ ತೀರ್ಪು ಸಮಸ್ತ 78 ಲಕ್ಷ ಇಪಿಎಸ್ ನಿವೃತ್ತರಿಗೆ ಅನ್ವಯವಾಗುತ್ತದೆ ಎಂಬುದನ್ನು ತಮಗೆ ಮನವರಿಕೆ ಮಾಡಿಕೊಡಲಾಗಿದೆ.
ಇನ್ನು ಏಕ ಸದಸ್ಯ ಪೀಠದ ತೀರ್ಪುನ್ನು ದ್ವಿ ಸದಸ್ಯ ಪೀಠದ ಮುಂದೆ ಪ್ರಶ್ನಿಸಲಾಗುವುದು. ದ್ವಿ ಸದಸ್ಯ ಪೀಠದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗುವುದು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ನೀಡುವ ತೀರ್ಪು ಸಮಸ್ತ ಇಪಿಎಸ್ ನಿವೃತ್ತರಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಯಿತು ಎಂದು ವಿವರಿಸಿದರು.
5) ಬೆಂಗಳೂರಿನಲ್ಲಿ ವಾಯು ಭಾರ ಕುಚಿತದಿಂದ ಹವಾಮಾನ ವೈಪರಿತ್ಯ ಉಂಟಾಗಿದ್ದು, ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ, ಕಾನೂನು ತಜ್ಞರನ್ನು ಸಂಪರ್ಕಿಸಿ, ಅವರ ಸಲಹೆ ಪಡೆದು, ಫ್ರೀಡಂ ಪಾರ್ಕ್ ಮೈದಾನದಲ್ಲಿ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ನಂಜುಂಡೇಗೌಡ ವಿವರವಾಗಿ ತಿಳಿಸಿದರು.
ಇನ್ನು ಈ ಸಭೆಯನ್ನು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ಎನ್ಎಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ನಿರ್ವಹಣೆ ಮಾಡಿದ್ದು, ಸಂಘದ ಖಜಾಂಚಿ ಡೋಲಪ್ಪ ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿದರು. ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು ನಮ್ಮ ಮುಂದಿನ ಹೋರಾಟದ ಬಗ್ಗೆ ತಿಳಿಸಿದ್ದು, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಟ್ರಸ್ಟ್ ಅಧ್ಯಕ್ಷರಾದ ಬ್ರಹ್ಮಚಾರಿ ನಮ್ಮ ಹೋರಾಟದ ದಿಕ್ಕು ಬದಲಾಗಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ನಾಗರಾಜು, ರುಕ್ಮೇಶ್, ಮನೋಹರ್, ಕೃಷ್ಣಮೂರ್ತಿ ಹಾಗೂ ಖಜಾಂಚಿ ರಮೇಶ್ ಹಾಜರಿದ್ದು, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
Related








