ಅ.9ರಂದು ಫ್ರೀಡಂ ಪಾರ್ಕ್‌ನಲ್ಲಿ EPS ಪಿಂಚಣಿ ದಾರರ ಬೃಹತ್ ಪ್ರತಿಭಟನೆ: BMTC – KSRTC ನಿವೃತ್ತ ನೌ.ಸಂ. ಅಧ್ಯಕ್ಷ ನಂಜುಂಡೇಗೌಡ

ಬೆಂಗಳೂರು: 238ನೇ ಸಿಬಿಟಿ ಸಭೆ ಅಕ್ಟೋಬರ್ 11, 12, 2025 ರಂದು ಬೆಂಗಳೂರುನಲ್ಲಿ ನಡೆಯುತ್ತಿದ್ದು, ಅಂದಿನ ಸಭೆಯ ಕಾರ್ಯ ಸೂಚಿ (ಅಜಾಂಡ) ಇನ್ನೂ ಪ್ರಕಟಗೊಂಡಿಲ್ಲ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ಈ ನಡುವೆ ಇಪಿಎಸ್ ನಿವೃತ್ತರ ಪಾಲಿಗೆ ಇದು ನಿರ್ಣಾಯಕ ಸಭೆಯಾಗಿರುವುದರಿಂದ ಎಲ್ಲ ಇಪಿಎಸ್ ನಿವೃತ್ತರು ಕಾರ್ಯಪ್ರವೃತ್ತರಾಗಿ ಕನಿಷ್ಠ ಪಿಂಚಣಿ ಸೇರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ಮೈದಾನದಲ್ಲಿ ಅಕ್ಟೋಬರ್ 09ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟು 41 ಸದಸ್ಯರನ್ನು ಹೊಂದಿರುವ ಸಿಬಿಟಿ ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮುನ್ಸೂಖ್ ಮಾಂಡವಿಯ, ಕೇಂದ್ರೀಯ ಮುಖ್ಯ ಭವಿಷ್ಯ ನಿಧಿ ಪ್ರಾಧಿಕಾರಸ್ಥರು, ಆದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 5 ಜನ ಕೇಂದ್ರ ಸರ್ಕಾರದ ಪ್ರತಿನಿಧಿಗಳು, 15 ಜನ ರಾಜ್ಯ ಸರ್ಕಾರದ ಪ್ರತಿನಿಧಿಗಳು, 10 ಜನ ಉದ್ಯೋಗದಾತ ಪ್ರತಿನಿಧಿಗಳು, 08 ಜನ ಕಾರ್ಮಿಕ ಪ್ರತಿನಿಧಿಗಳು ಸಭೆಯಲ್ಲಿರುತ್ತಾರೆ.
ಇನ್ನು ನೌಕರರ ಪಿಂಚಣಿ ಕಾಯಿದೆ ಅನ್ವಯ ಸಿಬಿಟಿ ರಚನೆಯಾಗಿದ್ದು, ಇಪಿಎಸ್ ವ್ಯಾಪ್ತಿಯಲ್ಲಿ ಬರುವ ಕೋಟ್ಯಂತರ ದುಡಿಯುವ ವರ್ಗದ ನೌಕರರಿಂದ ದೇಣಿಗೆ ಸ್ವೀಕರಿಸಿ, ನೌಕರರ ಕಲ್ಯಾಣ ರೂಪಿಸುವುದು ಸಿಬಿಟಿಯ ಉದ್ದೇಶವಾಗಿತ್ತು. ಆದರೆ, ನಿವೃತ್ತರ ಭವಿಷ್ಯ ಎಷ್ಟರ ಮಟ್ಟಿಗೆ ಉದ್ದಾರವಾಗಿದೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.
ಕಳೆದೊಂದು ದಶಕದಿಂದ ಇಪಿಎಸ್ ನಿವೃತ್ತರು ನಡೆಸಿದ ಹೋರಾಟಕ್ಕೆ ದೊರೆತ ಪ್ರತಿಫಲ ಶೂನ್ಯ. ಪ್ರಮುಖವಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಸಾರ್ವಜನಿಕ ಸೇವೆಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹಗಲಿರುಳೆನ್ನದೇ ಸೇವೆ ಸಲ್ಲಿಸಿದ್ದು, ಅವರ ಇಂದಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ಜನಪ್ರತಿನಿಧಿಗಳು ನಮ್ಮ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದು ಅತ್ಯಂತ ದುರಂತದ ಸಂಗತಿ. ಏನೇ ಆಗಲಿ ಈ ಬಾರಿ ತಕ್ಕ ಪಾಠ ಕಲಿಸಿಯೆ ತೀರೋಣ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಪಿಎಸ್ ನಿವೃತ್ತರನ್ನು ಬಲಿಕೊಟ್ಟು, ನಮ್ಮ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವುದು ನೋವಿನ ಸಂಗತಿ.

ಲಗಾಯ್ತೀನಿಂದಲೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಂಘದ ಜತೆ ಬೆಂಬಲವಾಗಿ ನಿಂತ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಬಾರಿ ನಮ್ಮ ಪ್ರತಿಭಟನಾ ಸಭೆಯ ಸಂಪೂರ್ಣ ನಿರ್ವಹಣೆ ನಡೆಸಲಿದ್ದಾರೆ.
ಆಗಿನ ಕಾಲದಲ್ಲಿ ಭಗವಾನ್ ಬುದ್ಧ ಹಾಗೂ ಬಸವಣ್ಣ ಬೋಧಿಸಿದ ತತ್ವ “ಸರ್ವರು ಸಮಾನರು, ಸರ್ವರಿಗೂ ಸಮ ಪಾಲು, ಸಮ ಬಾಳು” ಈ ಸಿದ್ಧಾಂತ ಇಂದಿಗೂ ಪ್ರಸ್ತುತ. ರಾಜ್ಯಾದ್ಯಂತ ಇರುವ ಎಲ್ಲ ಸಂಘಟನೆಗಳು ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಹೀಗಾಗಿ ಈ ಬಾರಿ “ಮಾಡು ಇಲ್ಲವೇ ಮಡಿ ಹೋರಾಟ”ಕ್ಕೆ ಮುಂದಾಗೋಣ ಎಲ್ಲ ಬನ್ನಿ ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ಮನವಿ ಮಾಡಿದ್ದಾರೆ.
Related
