ನಾಳೆ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: BMTC & KSRTC ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ


ಬೆಂಗಳೂರು: ಕನಿಷ್ಠ ಪಿಂಚಣಿ ₹7,500 ನಿಗದಿ ಪಡಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಮೇ 27ರ ನಾಳೆ ಬೆಳಗ್ಗೆ 10:30ಕ್ಕೆ ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆಯನ್ನು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.
ಈ ಸಂಬಂಧ ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಅಧ್ಯಕ್ಷ ನಂಜುಂಡೇಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ನಿವೃತ್ತರ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಈ ಪ್ರತಿಭಟನೆ ಕೂಗು ದೆಹಲಿಗೆ ತಲುಪಬೇಕು ಹಾಗಾಗಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದು, ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ, ಇತರೆ ಮುಖಂಡರು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ ಮುಖಂಡರು ಪ್ರಚಲಿತ ಸಂಗತಿ ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಈ ಪ್ರತಿಭಟನೆಯನ್ನುದ್ದೇಶಿ ಮಾತನಾಡುವ ವೇಳೆ ಪ್ರಸ್ತುತಪಡಿಸಲಿದ್ದಾರೆ. ಹೀಗಾಗಿ ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಅಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.
ನಮ್ಮ ಹೋರಾಟ ನಿಲ್ಲದು: ಇನ್ನು ಇಪಿಎಸ್ ನಿವೃತ್ತರ ಪರ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಅಧಿಕ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ಪಾರ್ಲಿಮೆಂಟ್ ಮುಂಗಾರು ಅಧಿವೇಶನ ಜುಲೈ 02, 2025 ರಿಂದ ಪ್ರಾರಂಭವಾಗಲಿದ್ದು, ಈ ದಿಸೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ನಮ್ಮ ಹೋರಾಟದ ಸಂದೇಶ ದೆಹಲಿ ತಲುಪಬೇಕು. ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.

ನಮ್ಮ ರಾಜ್ಯದವರೇ ಆದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರಾಗಿದ್ದು, ಈ ಕಮಿಟಿಯು ಕೇಂದ್ರ ಸರ್ಕಾರಕ್ಕೆ ಇಪಿಎಸ್ ನಿವೃತ್ತರ ಪರವಾಗಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ. ಈಗ ನೀಡುತ್ತಿರುವ ಕನಿಷ್ಠ ಪಿಂಚಣಿ ₹1,000 ದಿಂದ ₹7,500ಗೆ ನಿಗದಿಪಡಿಸಿ, ಬೆಲೆ ಏರಿಕೆಗೆ ಅನುಗುಣವಾಗಿ, ಭತ್ಯೆ ಸೇರಿಸಿ, ಪಿಂಚಣಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಸ್ತಾವನೆ ಕೇಂದ್ರ ಸರ್ಕಾರದ ಉನ್ನತ ಸಚಿವರ ಕಾರ್ಯಾಲಯದಲ್ಲಿ ಸಕಾರಾತ್ಮಕ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
Related

 








