ಇಪಿಎಸ್ ನಿವೃತ್ತರು ದಶಕದಿಂದ ಹೋರಾಟ ನಡೆಸುತ್ತಿದ್ದರೂ ಕಿವಿಗೊಡದ ಕೇಂದ್ರ ಸರ್ಕಾರ: ನಂಜುಂಡೇಗೌಡ ಕಿಡಿ


ಬೆಂಗಳೂರು: ಇಪಿಎಸ್ ಪಿಂಚಣಿದಾರರ 91ನೇ ಮಾಸಿಕ ಸಭೆ ಇತ್ತೀಚೆಗೆ ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಲಾಲ್‌ಬಾಗ್‌ನ ನಿರ್ಮಲ ವಾತಾವರಣದಲ್ಲಿ ವಾಯು ವಿಹಾರ ನಡೆಸಿ, ಸ್ಥಳಕ್ಕಾಗಮಿಸಿದ ಎಲ್ಲ ನಿವೃತ್ತರನ್ನು ಸಂಘದ ಖಜಾಂಚಿ ಡೋಲಪ್ಪನವರು ಸ್ವಾಗತಿಸಿದರು. ಅಲ್ಲದೆ ಜುಲೈ 28ರಂದು ನಗರದ ಇಪಿಎಫ್ಒ ಕಚೇರಿ ಆವರಣದಲ್ಲಿ ಜರುಗಿದ ಪ್ರತಿಭಟನೆ ಅತ್ಯಂತ ಮಹತ್ವದ್ದಾಗಿದ್ದು, ಭಾಗಿಯಾಗಿದ್ದ ಎಲ್ಲ ನಿವೃತ್ತರನ್ನು ಇದೇ ವೇಳೆ ಅಭಿನಂದಿಸಿದರು.
ಇನ್ನು ಇಪಿಎಸ್ ನಿವೃತ್ತರು ದಶಕದಿಂದ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಸಹ ಕೇಂದ್ರ ಸರ್ಕಾರ ಕಿವಿಗೊಡದೆ ಇರುವುದು ಅತ್ಯಂತ ಶೋಚನೀಯ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಕಿಡಿಕಾರಿದರು.
ಪಾರ್ಲಿಮೆಂಟ್‌ನ ಈ ಮುಂಗಾರು ಅಧಿವೇಶನದಲ್ಲಿ ನಮ್ಮ ರಾಜ್ಯದ ಸಂಸದರು ಧ್ವನಿಯೆತ್ತಲೇ ಬೇಕು ಹಾಗೂ ನಮ್ಮ ಎಲ್ಲ ಬೇಡಿಕೆಗಳು ಈಡೇರಲೇಬೇಕು. ಏನೇ ಆಗಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಈ ಸಂಬಂಧ ನಡೆಯುತ್ತಿರುವ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಜತೆಗೆ ಈ ಅಧಿವೇಶನ ಮುಗಿಯುವಷ್ಟರಲ್ಲಿ ಇಪಿಎಸ್ ನಿವೃತ್ತರ ಪರ ನಿರ್ಣಯ ಹೊರಬೀಳಲು ಒತ್ತಾಯಿಸಬೇಕು ಎಂದು ಕರೆ ನೀಡಿದರು.
ಚಿಕ್ಕಬಳ್ಳಾಪುರ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ನ ಖಜಾಂಚಿ ರಮೇಶ್ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ, ಕಮಾಂಡರ್ ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ. 7500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ನೀಡುವವರೆಗೂ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಎಲ್ಲ ಸದಸ್ಯರು ನಿರ್ಣಯಿಸಿದಂತೆ, ಪಾರ್ಲಿಮೆಂಟ್ ಮುಂಗಾರು ಅಧಿವೇಶನ ಇದೇ ಆಗಸ್ಟ್ 21ಕ್ಕೆ ಮುಗಿಯಲಿದ್ದು, ಅಷ್ಟರೊಳಗಾಗಿ ನಮ್ಮ ಈ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಈಡೇರಿಸದೆ ಹೋದಲ್ಲಿ ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಫ್ರೀಡಂ ಪಾರ್ಕ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಿದರು.

ಕೇಂದ್ರ ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಇಪಿಎಸ್ ನಿವೃತ್ತರ ಎಲ್ಲ ಮೂಲಭೂತ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಸಂಘದ ಪದಾಧಿಕಾರಿಗಳಾದ ಮನೋಹರ್ & ಕೃಷ್ಣಮೂರ್ತಿ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದರು.
Related
