NEWSಆರೋಗ್ಯನಮ್ಮರಾಜ್ಯ

ಜನೌಷಧ ಕೇಂದ್ರಗಳ ಸ್ಥಾಪನೆ ವಿಚಾರ: ಒಂದರಿಂದ ಮತ್ತೊಂದು ಮಳಿಗೆ ವ್ಯವಹಾರಕ್ಕೆ ಅಡ್ಡಿ ಎಂಬ ಕಾರಣ ಸಲ್ಲ- ಹೈಕೋರ್ಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು : ಬಡ ಜನತೆಗೆ ಕಡಿಮೆ ಬೆಲೆಗೆ ರೋಗ ನಿರೋಧಕ ಔಷಧಗಳು ಲಭ್ಯವಾಗುತ್ತಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳ ಸ್ಥಾಪನೆ ವಿಚಾರದಲ್ಲಿ ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಯ ವ್ಯವಹಾರಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕಾಗಿ ಮಧ್ಯಪ್ರವೇಶಿಸಲಾಗದು ಎಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶೀಲಾ ಭಟ್ ಎಂಬುವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿಸಿರುವುದನ್ನು ಪ್ರಶ್ನಿಸಿ, ಅದೇ ಜಿಲ್ಲೆಯ ಪುತ್ತೂರು ತಾಲೂಕಿನ ಸವಿನಯ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಸವಿನಯ ಬಿಂಬಿಸಿದ್ದಾರೆ. ಆದರೆ, ವಾಸ್ತವಿಕ ಚಿತ್ರಣ ಅದಲ್ಲ. ಇಂದು ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಭಾವನೆಯನ್ನು ನ್ಯಾಯಾಲಯ ರಕ್ಷಿಸಬೇಕಿದೆ. ಇದರಿಂದ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಪೀಠ ಹೇಳಿದೆ.

ಅಲ್ಲದೆ, ಈ ಕಾನೂನಾತ್ಮಕವಾಗಿ ಫಲಪ್ರದವಾದ ಯೋಜನೆಯನ್ನು ವಿನಾಕಾರಣ ಅಡ್ಡಿಪಡಿಸುವುದು ಹಿತಾಸಕ್ತಿಗೆ ತೊಂದರೆ ನೀಡಿದಂತಾಗಲಿದೆ ಎಂದು ತಿಳಿಸಿರುವ ಹೈಕೋರ್ಟ್, 500 ಮೀಟರ್ ಅಂತರದಲ್ಲಿ ಎರಡು ಪ್ರಧಾನ ಮಂತ್ರಿ ಜನೌಷಧ ಕೇಂದ್ರ ತೆರೆಯಲು ಅನುಮತಿಸಬಾರದು. ಆದರೆ ಅರ್ಜಿದಾರರಾಗಿರುವ ಸವಿನಯ ಅವರು ಶೀಲಾ ಭಟ್ ಎಂಬುವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದಾರೆ,

ಆದರೆ, ಸವಿನಯ ಅವರಿಗೆ ಜನೌಷಧ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ತನಗೆ ಮಂಜೂರಾಗಿರುವ ಕೇಂದ್ರಕ್ಕೂ ಶೀಲಾ ಭಟ್​​ಗೆ ಮಂಜೂರಾಗಿರುವ ಕೇಂದ್ರದ ನಡುವಿನ ಅಂತರ ಒಂದು ಕಿಲೋ ಮೀಟರ್ ಒಳಗಿದೆ ಎಂಬುದಾಗಿ ವಾದಿಸುವ ಹಕ್ಕು ಹೊಂದಿಲ್ಲ. ಹೀಗಾಗಿ, ಶೀಲಾ ಭಟ್​ಗೆ ಜನೌಷಧ ಕೇಂದ್ರ ತೆರೆಯಲು ಅನುಮತಿಸಿರುವುದರಲ್ಲಿ ಯಾವುದೇ ದೋಷ ಹುಡುಕಲಾಗದು ಎಂದು ಪೀಠ ಹೇಳಿದೆ.

ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಪ್ರದೇಶದ ಅಂತರ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ರೀತಿಯ ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುತಾತ್ಮಕವಾಗಿ ಫಲಪ್ರದವಾದ ಯೋಜನೆಯನ್ನು ಬಹಿಷ್ಕರಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಮಾಡಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ : ಜನೌಷಧ ಕೇಂದ್ರ ಆರಂಭಿಸಲು ಅಧಿಸೂಚನೆ ಪ್ರಕಟವಾದ ಬೆನ್ನಿಗೆ ಸವಿನಯ ಅವರು 20-11-2023ರಂದು ಮಹಿಳಾ ಉದ್ಯಮಿ ವಿಭಾಗದಡಿ ಪ್ರಾಥಮಿಕ ಕೃಷಿ ಪತ್ತಿನ ಕಟ್ಟಡದ ನೆಲಮಹಡಿಯಲ್ಲಿ ಜನೌಷಧ ಕೇಂದ್ರ ಆರಂಭಿಸುವ ಸಂಬಂಧ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಾತ್ವಿಕ ಒಪ್ಪಿಗೆಯೂ ದೊರೆತಿತ್ತು. ಅಲ್ಲದೇ, ಸಂಬಂಧಿತ ದಾಖಲೆ ಒದಗಿಸಿ, ಒಪ್ಪಿಗೆ ನೀಡಿ ಸ್ಟೋರ್ ಕೋಡ್ ನೀಡುವಂತೆ ಕೋರಿದ್ದರು.

ಈ ನಡುವೆ, ಶೀಲಾ ಭಟ್ ಸಹ ಅರ್ಜಿ ಹಾಕಿದ್ದು, ಅವರಿಗೆ ಜನೌಷಧ ಅಂಗಡಿ ಮಂಜೂರಾತಿ ದೊರೆತು, ಸ್ಟೋರ್ ಕೋಡ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ, ಶೀಲಾ ಭಟ್​ಗೆ ಸ್ಟೋರ್ ಕೋಡ್ ನೀಡಿರುವುದನ್ನು ರದ್ದುಪಡಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲಿ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸವಿನಯ ಅವರು ಹೈ ಕೋರ್ಟ್‌ ಮೆಟ್ಟಿಲೇರಿದ್ದರು.

Megha
the authorMegha

Leave a Reply

error: Content is protected !!