CRIMENEWSನಮ್ಮರಾಜ್ಯ

ಸುಳ್ಳು ಸುದ್ದಿ ಪ್ರಕರಣ: ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಜಿಪನಡು ಗ್ರಾಮದ ದೇರಾಜೆ ಎಂಬಲ್ಲಿ ಕಳೆದ ಜೂ.21 ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲವಾರು ದಾಳಿ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿ ಆರೋಪದಡಿ ಡಿಟಿವಿ ಕನ್ನಡ  ವೆಬ್ ಪೋರ್ಟಲ್ ವಿರುದ್ಧ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಅಪರಾಧ ಕ್ರಮಾಂಕ 75/2025 ಕಲಂ 240 ಬಿಎನ್ಎಸ್ ರಡಿ ಪ್ರಕರಣ ದಾಖಲಾಗಿದ್ದು, ಇದನ್ನು ರದ್ದು ಪಡಿಸುವಂತೆ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣ ರದ್ದು ಮಾಡುವಂತೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಪುತ್ತೂರು ನಿವಾಸಿ ಅಜರುದ್ದೀನ್ ಎಂಬವರು ಅರ್ಜಿ ಸಲ್ಲಿಸಿದ್ದರು. ಅಜರುದ್ದೀನ್ ಪರ ಸುಪ್ರೀಂ ಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ವಾದ ಮಂಡಿಸಿದ್ದರು. ಹಾಗೆಯೇ ಈ ಬಗ್ಗೆ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ‌ ವಕೀಲರಾದ ಆಸ್ಮಾ ವಾದ ಮಂಡನೆ ಮಾಡಿದರು.

ಅರ್ಜಿ ಪರ ವಕೀಲರಿಗೆ  ಜಾಮೀನು ಪಡೆದುಕೊಂಡಿದ್ದಾರೆಯೆ ಎಂದು ಮೌಖಿಕವಾಗಿ ನ್ಯಾಯಪೀಠ ಕೇಳಿತು. ಆ ವೇಳೆ ಇಲ್ಲ ಎಂದು ಹೇಳಿದ್ದಕ್ಕೆ ಮೊದಲು ಜಾಮೀನು ಪಡೆದುಕೊಳ್ಳಿ, ಬಳಿಕ ಮತ್ತೆ ಹೊಸ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವಿದೆ ಎಂದು ಹೇಳಿತು.

ಈ ನಡುವೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ,  ಪೊಲೀಸರು ತನಿಖೆ ಮಾಡಿ ಸತ್ಯಾಸತ್ಯತೆ ತಿಳಿಯಲಿ ಎಂದು ತಿಳಿಸಿತು. ಹೀಗಾಗಿ ಪ್ರಕರಣದ ರದ್ದತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅರ್ಜಿದಾರರು ಹಿಂಪಡೆದರು.

ಹೀಗಾಗಿ ಪ್ರಕರಣದ ತನಿಖೆಯು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!