ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘಕ್ಕೆ ಜುಲೈ 7ರ ಭಾನುವಾರವಾದ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ನಕಲಿ ಮತದಾರರನ್ನು ಕರೆತಂದು ಮತದಾನ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘದ ನೂರಾರು ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಸಹಕಾರ ಸಂಘಕ್ಕೆ ಚುನಾವಣೆ ನಡೆದು 5 ವರ್ಷಗಳು ಕಳೆದಿರುವುದರಿಂದ ಮತ್ತೆ 5ವರ್ಷದ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯನ್ನು ಜುಲೈ 7ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ “ಭಾರತ್ ಎಜುಕೇಷನಲ್ ಸೊಸೈಟಿ, 16ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು-560011” ರಲ್ಲಿ ನಡೆಸಲಾಗುತ್ತಿದೆ.
ಪ್ರಮುಖವಾಗಿ ಅನಂತ ಸುಬ್ಬರಾವ್ ಟೀಂ ಮತ್ತು ಕೂಟದ ಟೀಂಗಳ ತಲಾ 19 ಅಭ್ಯರ್ಥಿಗಳು ಕಣದಲ್ಲಿದ್ದು, ಈಗಾಗಲೇ ಚುನಾವಣೆ ನಡೆಯುತ್ತಿದೆ. ಆದರೆ, ಸಹಕಾರ ಸಂಘದಲ್ಲಿ ಸದಸ್ಯರಲ್ಲದವರನ್ನು ಕರೆ ತಂದು ನಕಲಿ ಮತ ಹಾಕಿಸುತ್ತಿದ್ದಾರೆ ಎಂದು ಕೂಟದ ಅಭ್ಯರ್ಥಿಗಳು ಆರೋಪಿ ಪ್ರತಿಭಟನೆ ಮಾಡುತ್ತಿದ್ದಾರೆ.
ಅಲ್ಲದೆ, ಹೈ ಕೋರ್ಟ್ ನಿನ್ನೆ ಚುನಾವಣಾ ಪಟ್ಟಿಯಲ್ಲಿ ಕೈ ಬಿಟ್ಟಿರುವ 771 ಮಂದಿಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಆದೇಶ ಮಾಡಿದೆ. ಆದರೆ, ಇಂದು ಕೋರ್ಟ್ ಆದೇಶದ ಪಟ್ಟಿಯಲ್ಲಿರುವವರ ಬಹುತೇಕರ ಹೆಸರು ಚುನಾವಣಾ ಪಟ್ಟಿಯಲ್ಲಿ ಇಲ್ಲ ಎಂದು ಆರೋಪಿ ಸಹಕಾರ ಸಂಘದ ನೂರಾರು ಸದಸ್ಯರು ಕಿಡಿಕಾರಿದ್ದಾರೆ.
ಒಟ್ಟಾರೆ, ಈ ಚುನಾವಣೆ ಒಂದು ರೀತಿಯ ಅಕ್ರಮದಿಂದ ಕೂಡಿದ್ದು, ಇಲ್ಲಿ ವಾಮ ಮಾರ್ಗದಲ್ಲಾದರೂ ಸರಿಯೇ ಗೆಲ್ಲಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಕೆಲವರು ಚುನಾವಣೆ ಅಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಹಕಾರ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಎಲ್ಲ ಅಕ್ರಮ ಗೊಂದಲಗಳ ನಡುವೆಯೂ ಮತದಾನ ನಡೆಯುತ್ತಿರುವುದು ಅಚ್ಚರಿಗೂ ಕಾರಣವಾಗಿದೆ. ಇಲ್ಲಿ ಸಂಘದ ಸದಸ್ಯರ ಹಣ ಉಳಿಸುವುದು ಮುಖ್ಯವಲ್ಲ. ನಾವು ಗೆದ್ದು ಅವರ ಹಣವನ್ನು ನುಂಗಿ ನೀರುಕುಡಿಯುವುದು ಮುಖ್ಯ ಎಂಬಂತೆ ಈ ಚುನಾವಣೆ ನಡೆಯುತ್ತಿರುವುದು ಮಾತ್ರ ದುರಾದೃಷ್ಟಕರ ಸಂಗತಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಳಿಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ 13 ಸಾಮಾನ್ಯ, ಒಂದು ಸ್ಥಾನ ಪರಿಶಿಷ್ಟ ಜಾತಿ ಮೀಸಲು, ಒಂದು ಸ್ಥಾನ ಪರಿಶಿಷ್ಟ ಪಂಗಡ ಮೀಸಲು, ಎರಡು ಸ್ಥಾನ ಮಹಿಳಾ ಮೀಸಲು, ತಲಾ ಒಂದೊಂದು ಹಿಂದುಳಿದ ವರ್ಗ ಎ ಮತ್ತು ಬಿ ಸ್ಥಾನಗಳೀಗೆ ಅಂದರೆ ಒಟ್ಟು 19 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಂದೇ ಮತ ಎಣಿಕೆ ಕೂಡ ನಡೆಸಲಾಗುವುದು ಬಳಿಕ ರಿಟರ್ನಿಂಗ್‌ಅಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ.