ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ (40) ಇಂದು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಜಯಶ್ರೀ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಜಯಶ್ರೀ ಇಹಲೋಕ ತ್ಯಜಿಸಿದ್ದಾರೆ. ಜಯಶ್ರೀ ಅವರು ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಪರ ಹೋರಾಟ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು.
ಕಬ್ಬಿನ ಬಾಕಿ ಬಿಲ್ ಪಾವತಿಗಾಗಿ ಒತ್ತಾಯಿಸಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ ಹೋರಾಟ ಮಾಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಜಯಶ್ರೀ ಕುರಿತು ಹಗುರವಾಗಿ ಮಾತಾಡಿ ಟೀಕೆಗೆ ಒಳಗಾಗಿದ್ದರು. ಬಳಿಕ ರಾಜ್ಯಾದ್ಯಂತ ಸಂಚಾರ ಮಾಡಿ ಮಹಿಳೆಯರನ್ನು ರೈತ ಸಂಘಟನೆಯಲ್ಲಿ ತೊಡಗಿಸಿದ್ದರು ಜಯಶ್ರೀ.
ಮೃತ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.