ಬನ್ನೂರು: ಬನ್ನೂರು ದೊಡ್ಡಕೆರೆ ತಳಭಾಗದ ಅಚ್ಚುಕಟ್ಟು ನಾಲೆಗಳಾದ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ, ಮುಖ್ಯನಾಲೆ ಹಾಗೂ ಸಿಡಿಎಸ್ ಬಡಾವಣೆ ನಾಲೆಗಳ ಒತ್ತುವರಿ ತೆರವು ಗೊಳಿಸಿ ಗಿಡಗಂಟೆ ಹಾಗೂ ಹೂಳು ತೆಗೆಸಬೇಕು ಎಂದು ಒತ್ತಾಯಿಸಿ ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.

ತಿ.ನರಸೀಪುರ ತಾಲೂಕಿನ ಮೈಸೂರು-ಬನ್ನೂರು ರಸ್ತೆಯ ಮಾದೇಗೌಡನ ಹುಂಡಿ ಗೇಟ್ ಬಳಿ ಇರುವ ಕೆಆರ್ಎಸ್ ಉಪ-ವಿಭಾಗ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್ ಅವರಿಗೆ ರಾಜ್ಯ ಕಬ್ಬ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಇಂದು ಬನ್ನೂರು ಗ್ರಾಮಾಂತರ ಘಟಕದಿಂದ ಒತ್ತಾಯ ಪತ್ರ ಸಲ್ಲಿಸಿದರು.
ಪ್ರಮುಖವಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹಳ್ಳಗಳಲ್ಲಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು, ಗಾಣಿಗನಕೊಪ್ಪಲು ಶ್ರೀ ವೆಂಕಟೇಶ್ವರ ದೇವಸ್ಥಾನದ ಹತ್ತಿರ ಇರುವ ದೋಣಿಕಲ್ಲು ಒಡೆದು ಸಂಪೂರ್ಣ ಶಿಥಿಲವಾಗಿದ್ದು ದುರಸ್ತಿ ಮಾಡಿ ಅನುಕೂಲ ಕಲ್ಪಿಸಬೇಕು. ಅಲ್ಲದೆ ಸಿಡಿಎಸ್ ನಾಲೆಯ ಬಿ.ಬೆಟ್ಟಹಳ್ಳಿ ಹತ್ತಿರ ಇರುವ ಎಸ್ಕೇಪ್ ಹಳ್ಳದ ಒತ್ತುವರಿ ತೆರವುಗೊಳಿಸಿ, ರೈತರ ಬೆಳೆಗಳ ಮೇಲೆ ನೀರು ಹರಿದು ಹೋಗಿ ಆಗುತ್ತಿರುವ ಬೆಳೆ ನಷ್ಟ ತಪ್ಪಿಸಲು, ಹಳ್ಳದಲ್ಲಿ ಸರಾಗವಾಗಿ ನೀರು ಹರಿಯುವಂತೆ ಆಧುನಿಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕದೇವರಾಯ ಬಡಾವಣೆಯ ನಾಲೆಯ ಬಿಬೆಟ್ಟಹಳ್ಳಿ ಗ್ರಾಮದ ಹತ್ತಿರ ಇರುವ ಎಸ್ಕೇಪ್ ಹಳ್ಳ ತುಂಬಾ ಒತ್ತುವರಿಯಾಗಿದ್ದು, ಗಿಡ ಗಂಟಿಗಳು ಹಾಗೂ ಹೂಳಿನಿಂದ ಮುಚ್ಚಿಕೊಂಡಿರುವ ಕಾರಣ ಮಳೆಗಾಲದಲ್ಲಿ ಎಸ್ಕೇಪ್ ಓಪನ್ ಮಾಡಿದಾಗ ರೈತರ ಜಮೀನುಗಳಿಗೆ ವಿಪರೀತ ನೀರು ನುಗ್ಗಿ ಬೆಳೆಗಳು ಹಾಳಾಗಿ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಕಷ್ಟಕರವಾಗಿದೆ.
ಇದೇ ರೀತಿ ಮೋರ್ಕನ ಕಾಲುವೆ ಹಳ್ಳ ಸಂಪೂರ್ಣವಾಗಿ ಒತ್ತುವರಿಯಾಗಿದ್ದು ಮಳೆಗಾಲದಲ್ಲಿ ಅಕ್ಕಪಕ್ಕದ ಜಮೀನು ಸಂಪೂರ್ಣವಾಗಿ ಮುಳುಗಡೆಯಾಗುತ್ತಿವೆ, ಪ್ರತಿ ವರ್ಷವು ಇದರಿಂದ ಮಳೆಗಾಲದಲ್ಲಿ ಬೆಳೆ ಮುಳುಗಡೆಯಾಗಿ ಬೆಳೆ ಹಾನಿಯಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ.
ಕೃಷಿ ಅಧಿಕಾರಿಗಳು ಸಮೀಕ್ಷೆ ನಡೆಸಿ, ಮೂಲ ಕಾರಣ ಹಳ್ಳ ಕೊಳ್ಳ ಹೂಳು ತೆಗೆಯದೆ ಹಾಗೂ ಒತ್ತುವರಿ ಆಗಿರುವುದೆ ಕಾರಣ ಇದೆ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇದೆ ರೀತಿ ಮಳೆಗಾಲದಲ್ಲಿ ಹೆಚ್ಚು ಬೆಳೆಗಳು ಹಾನಿ ಗೊಳಗಾಗುತ್ತವೆ ಎಂದು ತಮಗೆ ವರದಿ ನೀಡಿದ್ದಾರೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಗಾಣಿಗನಕೊಪ್ಪಲು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಕ್ಕ ಸೇತುವೆ ತಳ ಭಾಗದಲ್ಲಿ ನಂಜಯನ ಪುಟ್ಟರಾಜು ಜಮೀನು ಹತ್ತಿರ ಇರುವ ಹೊಡ್ಡು ಒಡೆದು ಹೋಗಿದೆ. ಇದು ದೋಣಿಕಲ್ಲು ಮುಖಾಂತರ ನೂರಾರು ಎಕರೆಗೆ ನೀರು ಪೂರೈಸುತ್ತದೆ. ಕಳೆದ 4 ವರ್ಷಗಳಿಂದ ಇದು ತಳಭಾಗದಲ್ಲಿ ನೀರಿನ ರಭಸಕ್ಕೆ ಹಾಳಾಗಿದ್ದು ನೀರು ನಿಲ್ಲದೆ ಕೆಳಭಾಗಕ್ಕೆ ಹೋಗುತ್ತಿದ್ದು ರೈತರು ಬೆಳೆ ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ.
ಈ ಎಲ್ಲ ವಿಚಾರವಾಗಿ ನಾವು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಇಲಾಖೆಗೆ ದೂರು ನೀಡಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ ತಾವು ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಮತ್ತು ಹೂಳು ತೆರವು ಗೋಳಿಸಿ ಇವುಗಳನ್ನು ಆಧುನಿಕರಣ ಮಾಡಿ ಮಳೆಗಾಲದಲ್ಲಿ ರೈತರ ಬೆಳೆಗಳ ಮೇಲೆ ನೀರು ನುಗ್ಗದೆ ಹಳ್ಳದಲ್ಲಿ ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಅತ್ತ ಹಳ್ಳಿ ದೇವರಾಜ್ ನೇತೃತ್ವದಲ್ಲಿ ಇಂದು ಬನ್ನೂರು ಗ್ರಾಮಾಂತರ ಘಟಕದಿಂದ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್ ಅವರಿಗೆ ಒತ್ತಾಯ ಪತ್ರ ಸಲ್ಲಿಸುವ ವೇಳೆ ನಿಯೋಗದಲ್ಲಿ ಅತ್ತಹಳ್ಳಿ ಅರುಣ್ ಕುಮಾರ್, ಸಿ.ಲಿಂಗಣ್ಣ, ಕೇತುಪುರ ಗಿರಿರಾಜ್, ಮೇಗಳಕೊಪ್ಪಲು ಸಿ.ಕುಮಾರ್, ಅತ್ತಹಳ್ಳಿ ಚೇತನ್, ರಾಮ, ಸುನಿಲ್ ಕುಮಾರ್ , ರಾಮಕೃಷ್ಣ, ಸ್ವಾಮಿ, ಕೃಷ್ಣಪ್ಪ, ಕಂಚನಹಲ್ಲಿ ಕುಮಾರ್ ಮುಂತಾದ ರೈತರು ಇದ್ದರು.
Related










