NEWSಕೃಷಿನಮ್ಮರಾಜ್ಯ

ಫೆ.7ರಿಂದ ಎಂಎಸ್ಪಿ ಖಾತ್ರಿಗಾಗಿ ಕನ್ಯಾಕುಮಾರಿ TO ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ: ರಾಜ್ಯಾಧ್ಯಕ್ಷ ಕುರುಬೂರ್‌ ಶಾಂತಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಹಿ ಸಂಗ್ರಹ ಪತ್ರ ಸ್ವೀಕರಿಸಿ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಕುರುಬೂರ್‌ ಶಾಂತಕುಮಾರ್ ತಿಳಿಸಿದ್ದಾರೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಇಂದು ಮಧ್ಯಾಹ್ನ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 7ರಂದು ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ಆರಂಭವಾಗುತ್ತದೆ. ಈ ಯಾತ್ರೆ ಸಾಗುವ ದಾರಿಯಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಸುಮಾರು 40 ದಿನಗಳ ಈ ಯಾತ್ರೆ ಕಾಶ್ಮೀರ ತಲುಪಿ, ನಂತರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮಾರ್ಚ್ 19 ರಂದು ದೇಶದ ಎಲ್ಲ ರೈತರ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.

ದೆಹಲಿ ಗಡಿಯಲ್ಲಿ ವರ್ಷಾನುಕಾಲ ರೈತರು ಚಳವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರು ಗಂಭೀರ ಕ್ರಮ ಜಾರಿಯಾಗಿಲ್ಲದ ಕಾರಣ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ರಾಷ್ಟ್ರೀಯ ಸಂಚಾಲಕ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ 131 ದಿನ ಉಪವಾಸ ಸತ್ಯಾಗ್ರಹ ನಡೆಸಿದಾಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸಮಸ್ಯೆ ಪರಿಹಾರಕ್ಕೆ ವರದಿ ನೀಡುವಂತೆ ಸೂಚಿಸಿದರು. ಈ ಸಮಿತಿ ರೈತರ ಪರವಾಗಿ ಎಂಎಸ್‌ಪಿ ಖಾತ್ರಿ ಕಾಯ್ದೆ ಅವಶ್ಯಕತೆ ಎಂದು ತಿಳಿಸಿದೆ.

ಅದೇ ರೀತಿ ಕೇಂದ್ರ ಸರ್ಕಾರದ ಕೃಷಿ ಅಧ್ಯಯನದ 31 ಜನರ ಸಂಸದೀಯ ಸಮಿತಿ ಸಹ ರೈತರ ಪರವಾದ ವರದಿ ನೀಡಿ ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಬೆಂಬಲಿಸಿದೆ ಇದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಹೋರಾಟದ ಫಲವಾಗಿ ಆಗಿರುವ ಸಾಧನೆ. ಆದರೆ ಕೇಂದ್ರ ಸರ್ಕಾರ ಇದರ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಆದ್ದರಿಂದ ರೈತರಲ್ಲಿ ಜಾಗೃತಿ ಮೂಡಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿದೆ. ದೇಶದ ರೈತರಿಗೆ ಎಂಎಸ್ಪಿ ಖಾತರಿ ಕಾನೂನು ಇಲ್ಲದ ಕಾರಣ ವರ್ಷಕ್ಕೆ 15 ಲಕ್ಷ ಕೋಟಿ ರೂ.ನಷ್ಟ ಅನುಭವಿಸುತ್ತಿದ್ದಾರೆ ಇದರ ಹಿನ್ನೆಲೆಯಲ್ಲಿ ಫೆಬ್ರವರಿ 7ರಿಂದ ರೈತ ಜಾಗೃತಿ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ, ಪಾಂಡಿಚರಿ, ತಮಿಳುನಾಡು ಮುಖಾಂತರ ಹಾದು ಹೋಗಿ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಬಳಿಕವೂ ಈ ಯಾತ್ರೆ ಸಾಗಲಿದ್ದು ಈ ಮಾರ್ಗದಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಮಾರ್ಚ್ 19 ರಂದು ಪ್ರಧಾನಿಯವರಿಗೆ ಸಲ್ಲಿಸಲಾಗುವುದು.

ಸುಮಾರು 40 ದಿನಗಳ ಕಾಲ ನಡೆಯುವ ಈ ಯಾತ್ರೆ ಕಾಶ್ಮೀರ ತಲುಪಿ ನಂತರ ಮಾರ್ಚ್ 19 ರಂದು ದೆಹಲಿಯ ರಾಮ್ ಲೀಲಾ ಮೈದಾನಕ್ಕೆ ಆಗಮಿಸಿ ದೇಶದ ಎಲ್ಲ ರೈತರ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಬಳಿಕ ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇನ್ನು ಫೆ.10 ರಂದು ಚಾಮರಾಜನಗರದಲ್ಲಿ, 11 ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ರೈತರ ಸಮಾವೇಶ, ಸಹಿ ಸಂಗ್ರಹ ಪತ್ರ ಸ್ವೀಕರಿಸಲಾಗುವುದು. ಬಳಿಕ ಮಂಡ್ಯದಲ್ಲಿ ಎರಡು ಗಂಟೆಯಿಂದ ಮುಂದುವರಿದು ರಾಮನಗರಕ್ಕೆ ಸಂಜೆ 5ಕ್ಕೆ ಬರಲಿದೆ.

ಫೆ.12 ರಂದು ಬೆಂಗಳೂರನಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಹಕಾರ ಬೆಂಬಲ ಕೋರಲಾಗುವುದು. ಚಿಕ್ಕಬಳ್ಳಾಪುರ ಒಂದು ಗಂಟೆಗೆ ಸಮಾವೇಶ ನಡೆಸಿ ನಂತರ ಆಂಧ್ರಪ್ರದೇಶಕ್ಕೆ ಹೋಗಲಿದೆ. ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳ ಮುಖಂಡರು ಸ್ವಯಂ ಪ್ರೇರಿತವಾಗಿ ಸಹಿ ಮಾಡಿದ ಪತ್ರಗಳನ್ನು ಯಾತ್ರೆ ಹಾದು ಹೋಗುವ ಮಾರ್ಗದಲ್ಲಿ ಸಲ್ಲಿಸಿ ಬೆಂಬಲಿಸಿ ನಿಮ್ಮ ನಿಮ್ಮ ಭಾಗದಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿದ ಪತ್ರವನ್ನು ಯಾತ್ರೆಯ ಮುಖಂಡರಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಗುರುದೇವ ನಾರಾಯಣ ಕುಮಾರ್, ನರಸರೆಡ್ಡಿ ಪೊಲೀಸ್ ಪಾಟೀಲ್, ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಬೈರಾರೆಡ್ಡಿ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಇದ್ದರು.

Megha
the authorMegha

Leave a Reply

error: Content is protected !!