ಜ.8ರಂದು ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ರೈತ ಚಳವಳಿಗೆ ನಿರ್ಧಾರ: ಧಲೆವಾಲ

ಬೆಂಗಳೂರು: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ಜನವರಿ 8ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ರೈತ ಮುಖಂಡರ ಸಭೆ ನಡೆಸಿ ರಾಷ್ಟ್ರವ್ಯಾಪಿ ರೈತ ಚಳವಳಿಯ ಭವಿಷ್ಯದ ಕ್ರಮವನ್ನು ನಿರ್ಧರಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯತರ ಸಂಘಟನೆಯ ರಾಷ್ಟ್ರೀಯ ಮುಖಂಡ ಜಗಜಿತ್ ಸಿಂಗ್ ಧಲೆವಾಲ ತಿಳಿಸಿದ್ದಾರೆ.

ಇತ್ತೀಚೆಗೆ ಕೃಷಿ ಕುರಿತ ಸಂಸದೀಯ ಸಮಿತಿ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತ ಅಧಿಕಾರ ಸಮಿತಿಯು ತನ್ನ ವರದಿಗಳನ್ನು ಸಲ್ಲಿಸಿದ್ದು, ಅದರಲ್ಲಿ ರೈತ ಸಮುದಾಯದ ಕಲ್ಯಾಣಕ್ಕಾಗಿ MSP ಗ್ಯಾರಂಟಿ ಕಾನೂನನ್ನು ಜಾರಿಗೆ ತರಬೇಕು ಎಂದು ಸೂಚಿಸಿದೆ. ಆದರೆ ಇನ್ನೂ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ನಗರದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪ್ರಧಾನ ಮಂತ್ರಿಗಳು ಸ್ವದೇಶಿ ಮತ್ತು ಆತ್ಮ-ನಿರ್ಭರ ಕಾರ್ಯಾಚರಣೆಗಳಿಗಾಗಿ ಪ್ರತಿಪಾದಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ, ಕೇಂದ್ರ ಸರ್ಕಾರವು ಪ್ರತಿ ವರ್ಷ 2.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಧಲೆವಾಲ ಹೇಳಿದರು.
ರೈತರು ತಮ್ಮ ಬೆಳೆಗಳಿಗೆ ಸರಿಯಾದ ಕನಿಷ್ಠ ಬೆಂಬಲ ಬೆಲೆ (MSP) ಪಡೆಯುತ್ತಿಲ್ಲ, ಇದರಿಂದಾಗಿ ರೈತ ಸಮುದಾಯಕ್ಕೆ ಭಾರಿ ಆರ್ಥಿಕ ನಷ್ಟವಾಗಿದೆ ಮತ್ತು ಸತತ ಸರ್ಕಾರಗಳ ತಪ್ಪು ನೀತಿಗಳಿಂದಾಗಿ 7 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ನಿಗದಿ ಮಾಡಿದ ಕಬ್ಬಿನ ಹೆಚ್ಚುವರಿ ದರ ನೂರು ರೂಪಾಯಿ ತಡೆಯಾಜ್ಞೆ ನೀಡಲು ಒಪ್ಪದೇ ಉಚ್ಚ ನ್ಯಾಯಾಲಯ ನ್ಯಾಯಾಧೀಶರು ರೈತರ ಸಂಕಷ್ಟವನ್ನು ಅರಿತು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ತಕ್ಕ ಎಚ್ಚರಿಕೆ ನೀಡಿ ಪಾಠ ಹೇಳಿದ್ದಾರೆ. ಇದು ಸ್ವಾಗತರ್ಯಕ್ರಮ ವಾಗಿದೆ. ಈಗಲಾದರೂ ಸಕ್ಕರೆ ಕಾರ್ಖಾನೆ ಮಾಲೀಕರು ಇಬ್ಬಂದಿ ವರ್ತನೆ ತೋರದೆ ನಿಗದಿಗೊಳಿಸಿದ ಹಣ ಕೂಡಲೇ ರೈತರ ಖಾತೆಗೆ ಪಾವತಿಸಬೇಕು ಆಗ್ರಹಿಸಿದರು.
ಭಾರತ ಅಮೆರಿಕ ನಡುವೆ ಕೃಷಿ ವ್ಯಾಪಾರ ಒಪ್ಪಂದ ದೇಶದ ರೈತರು ವಿರೋಧಿಸುತ್ತೇವೆ ಕೇಂದ್ರ ಸರ್ಕಾರ ಈ ಒಪ್ಪಂದದಿಂದ ದೂರ ಸರಿಯಬೇಕು. ರಾಜ್ಯದಲ್ಲಿ ಅಧಿಕಾರದ ಕುರ್ಚಿಯ ಕಿತ್ತಾಟದಿಂದ ಆಡಳಿತ ಯಂತ್ರ ದುರ್ಬಲವಾಗುತ್ತಿದೆ ಎಂದರು.
ರಾಷ್ಟ್ರೀಯ ರೈತ ಮುಖಂಡ ಹರಿಯಾಣ ರಾಜ್ಯದ ಅಭಿಮನ್ಯು ಕೋಆರ್ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶ್ರೀನಿವಾಸಲು, ಬೈರಾರೆಡ್ಡಿ, ತುಮಕೂರ್ ಶಿವಕುಮಾರ್, ಕನಕಪುರ ಗಜೇಂದ್ರ ಇದ್ದರು.
Related









