
ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಆಗಲೇಬೇಕು ಎಂದು ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಹಾಗೂ ಕರ್ನಾಟಕದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ರೈತ ಮುಖಂಡರು ಭಾಗವಹಿಸಿ ಮಾತನಾಡಿದ್ದು, ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಹೀಗಾಗಿ ವರ್ಷದಿಂದಲೂ ದೆಹಲಿಯಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ ಎಂದು ರೈತ ಮುಖಂಡರು ಹೇಳಿದರು.
ಇನ್ನು ಕಳೆದ ವರ್ಷ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಘೋಯಲ್ ನೇತೃತ್ವದಲ್ಲಿ ಐದು ಸಭೆಗಳು ನಡೆದಿದ್ದು, ಯಾವುದೇ ಫಲಶೃತಿ ಕಂಡು ಬಂದಿಲ್ಲ. ರೈತ ಚಳವಳಿಗೆ ಒಂದು ವರ್ಷ ತುಂಬಿದ ನಂತರ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ 2 ಸಭೆಗಳನ್ನು ನಡೆಸಿದ್ದಾರೆ. 3ನೇ ಸಭೆಯು ಮಾರ್ಚ್ 19ಕ್ಕೆ ನಿಗದಿಯಾಗಿದೆ ಕೇಂದ್ರ ಸರ್ಕಾರ ಕೇವಲ ಸಭೆಗಳನ್ನು ನಡೆಸಿ ವಿಳಂಬ ಧೋರಣೆ ತೋರುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ವಿಳಂಬ ನೀತಿ ಖಂಡಿಸಿ ಈಗಾಗಲೇ ನಿನ್ನೆ ರಾತ್ರಿ ನಡೆದ ಗೂಗಲ್ ಮೀಟ್ ಸಭೆಯಲ್ಲಿ ತೀರ್ಮಾನಿಸಿದಂತೆ ಇದೆ ಮಾ.5 ರಂದು ಜಗಜಿತ್ ಸಿಂಗ್ ದಲೈವಾಲ ಅವರ ಉಪವಾಸ ಸತ್ಯಾಗ್ರಹ 100 ದಿನ ಪೂರೈಸಲಿದ್ದು ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ವತಿಯಿಂದ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯ ಪತ್ರ ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ರೈತ ಸಂಘಗಳ ಒಕ್ಕೂಟದ ಮುಖಂಡರು ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಖಂಡನೆ ಮಾಡಿದರು. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ಎಲ್ಲ ರಾಜ್ಯಗಳಿಂದ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ದೆಹಲಿ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮುಖಂಡ ಹಾಗೂ ತಮಿಳುನಾಡು ವ್ಯವಸಾಯ ಸಂಘಂದ ಅಧ್ಯಕ್ಷ ರಾಮನ ಗೌಂಡರ್ ಎಚ್ಚರಿಕೆ ನೀಡಿದರು.
ಕಳೆದ ವರ್ಷ ಫೆ.12ರಲ್ಲಿ ದೆಹಲಿಯ ರೈತ ಹೋರಾಟದಲ್ಲಿ ಭಾಗವಹಿಸಲು ಕರ್ನಾಟಕದಿಂದ ಹೋಗುತ್ತಿದ್ದ 70 ರೈತ ಹಾಗೂ ರೈತ ಮಹಿಳೆಯರ ತಂಡವನ್ನು ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಪೊಲೀಸರು ಬಂಧಿಸುವ ಸಂದರ್ಭದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮ ಶಾಂತಕುಮಾರ್ ಅವರು ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ರೈತರ ತಂಡವನ್ನು ವಾಪಸ್ ಕಳುಹಿಸಿದರು.
ಪೊಲೀಸರ ಈ ರೀತಿಯ ವರ್ತನೆ ಸರಿಯಾದ ಕ್ರಮವಲ್ಲ. ರೈತರು ದೇಶದ ಅನ್ನದಾತರು ದೇಶದ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿರುವುದು ಎಂದು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಭಾರತಕ್ಕೆ ಜಗಜಿತ್ ಸಿಂಗ್ ದಲೈವಾಲಾ, ದಕ್ಷಿಣ ಭಾರತಕ್ಕೆ ಕುರುಬೂರು ಶಾಂತಕುಮಾರ್ ದೇಶದ ರೈತರ ಎರಡು ಕಣ್ಣುಗಳಿದ್ದಂತೆ. ಫೆ.14, 2025 ರಂದು ಕೇಂದ್ರ ಸರ್ಕಾರ ಚಂಡಿಗಢದಲ್ಲಿ ಕರೆದಿದ್ದ ಸಭೆಗೆ ಹೋಗುತ್ತಿದ್ದಾಗ ಶಾಂತಕುಮಾರ್ ಅವರು ಹೋಗುತ್ತಿದ್ದ ಕಾರ್ ಚಂಡಿಗಢದ ಪಟಿಯಾಲ ಬಳಿ ಅಪಘಾತಕ್ಕೀಡಾಗಿ ಸುದೈವ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮ ಶಾಂತಕುಮಾರ್ ಅವರು ಸಹ ಹೋರಾಟ ಮಾಡುತ್ತಿರುವುದು ದೇಶದ ರೈತರ ಹಿತಕ್ಕಾಗಿ. ಎಂಎಸ್ಪಿ ಗ್ಯಾರಂಟಿ ಖಾತ್ರಿ ಕಾನೂನು ಜಾರಿಗೆಯಾಗಲಿ. ರೈತರ ಸಾಲ ಮನ್ನಾ ಆಗಲಿ, ಸ್ವಾಮಿನಾಥನ್ ವರದಿ ಜಾರಿಯಾಗಲಿ ಹಾಗೂ 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಯಾಗಲಿ ಎಂಬುದು ದೇಶದ ರೈತರ ಒಗ್ಗಟ್ಟಿನ ಹೋರಾಟ ಎಂಬುದನ್ನು ಕೇಂದ್ರ ಸರ್ಕಾರ ಅರಿಯಲಿ. ಈ ಎಲ್ಲ ಯೋಜನೆಗಳು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಮಾರ್ಚ್ 19 ರಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಮೂರನೇ ಸಭೆ ಏರ್ಪಡಾಗಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲೇಬೇಕು. ಈಗಾಗಲೇ ಜಗಜಿತ್ ಸಿಂಗ್ ದಲೈವಾಲಾ ರವರ ಉಪವಾಸ ಸತ್ಯಾಗ್ರಹವು 98 ದಿನಗಳು ಮುಗಿದಿವೆ. ಅವರ ಪ್ರಾಣಕ್ಕೆ ಅಪಾಯವಾದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ನಾವು ಮಾರ್ಚ್ 19 ರ ಸಭೆಯ ನಿರ್ಧಾರಗಳನ್ನು ಕಾದು ನೋಡುತ್ತೇವೆ. ಆದರೆ ಕೇಂದ್ರ ಸರ್ಕಾರ ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ನಾವು ದಕ್ಷಿಣ ಭಾರತ ರೈತರಗಳು ಸಹಸ್ರಾರು ಸಂಖ್ಯೆಯಲ್ಲಿ ದೆಹಲಿಯನ್ನು ಮುತ್ತಿಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ.
ಪತ್ರಿಕಾಗೋಷ್ಠಿಯಲ್ಲಿ ರಾಮನ್ ಗೌಂಡರ್ ಹಾಗೂ ತಮಿಳುನಾಡಿನ ಮುಖಂಡ ಎ.ಎಸ್.ಬಾಬು, ಭಾನುಮತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ರಾಜ್ಯ ಉಪಾಧ್ಯಕ್ಷ ಬೆಳಗಾವಿಯ ಸುರೇಶ್ ಮಾ.ಪಾಟೀಲ್, ಕಲಬುರ್ಗಿ ಬಸವರಾಜ್ ಪಾಟೀಲ್, ಗದಗ ಜಿಲ್ಲಾಧ್ಯಕ್ಷ ರವಿಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಶ್ರೀನಿವಾಸಲು,ತಮಿಳು ನಾಡಿನ ಷಣ್ಮುಖ ಸುಂದರಂ, ಯಾದಗಿರಿಯ ಕೊಟ್ರೇಶ್ ಚೌದ್ರಿ ಬೈರಾರೆಡ್ಡಿ ಮುಂತಾದವರಿದ್ದರು.